ಪಂಜಾಬ್ ಜೈಲಿನಲ್ಲಿ ಸಂದರ್ಶನ ನೀಡಿದ ಲಾರೆನ್ಸ್ ಬಿಷ್ಣೋಯಿ: ಡಿಎಸ್ಪಿ ವಜಾ
PC: X.com
ಚಂಡೀಗಢ: ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯಿ 2022ರ ಸೆಪ್ಟೆಂಬರ್ ನಲ್ಲಿ ಜೈಲಿನಲ್ಲಿದ್ದುಕೊಂಡೇ, ಮೊಹಾಲಿಯ ಖರಾರ್ ನಲ್ಲಿ ಅಪರಾಧ ತನಿಖಾ ಏಜೆನ್ಸಿ ಪೊಲೀಸ್ ಕಚೇರಿ ಆವರಣದಲ್ಲಿ ಸಂದರ್ಶನ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರ ಡಿಎಸ್ಪಿ ಗುರ್ಷೇರ್ ಸಿಂಗ್ ಸಂಧು ಅವರನ್ನು ಸೇವೆಯಿಂದ ವಜಾಗೊಳಿಸಿದೆ.
ರಾಜ್ಯ ಗೃಹ ಕಾರ್ಯದರ್ಶಿ ಗುರುಕಿರಾತ್ ಕೃಪಾಲ್ ಸಿಂಗ್ ವಜಾ ಆದೇಶಕ್ಕೆ ಸಹಿ ಮಾಡಿದ್ದಾರೆ. 2024ರ ಅಕ್ಟೋಬರ್ ನಿಂದ ಅಮಾನತುಗೊಂಡಿರುವ ಸಂಧು ಅವರ ದುರ್ನಡತೆ, ನಿರ್ಲಕ್ಷ್ಯ ಮತ್ತು ಕರ್ತವ್ಯಚ್ಯುತಿಯಿಂದಾಗಿ ಸಿಐಎ ಖರಾರ್ ಕಸ್ಟಡಿಯಲ್ಲಿದ್ದ ಅವಧಿಯಲ್ಲಿ ಬಿಷ್ಣೋಯಿ ನೀಡಿದ ಸಂದರ್ಶನದಿಂದ ಪಂಜಾಬ್ ಪೊಲೀಸ್ ಇಲಾಖೆಯ ಇಮೇಜ್ ಗೆ ತೀವ್ರ ಕಳಂಕ ಉಂಟಾಗಿದೆ ಎಂದು ವಜಾ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲರಾಗಿರುವುದು, ಪಂಜಾಬ್ ಪೊಲೀಸ್ ನಿಯಮಾವಳಿಯ ಶಿಸ್ತು ಮತ್ತು ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪಂಜಾಬ್ ಲೋಕಸೇವಾ ಆಯೋಗದ ಒಪ್ಪಿಗೆ ಪಡೆದು ಈ ವಜಾ ಆದೇಶ ಜಾರಿಗೊಳಿಸಲಾಗಿದೆ. ಇದಕ್ಕೂ ಮುನ್ನ ಸಂಧು ತನಿಖೆಗೆ ಸಹಕರಿಸುತ್ತಿಲ್ಲ ಹಾಗೂ ಅವರ ಚಲನ ವಲನಗಳು ತಿಳಿಯುತ್ತಿಲ್ಲ ಎಂದು ಸರ್ಕಾರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ ಮುಂದೆ ಸ್ಪಷ್ಟಪಡಿಸಿತ್ತು.