ಪಂಜಾಬಿ ಸಂಗೀತ ಉದ್ಯಮವನ್ನು ಬೆಚ್ಚಿ ಬೀಳಿಸಿದ ಲಾರೆನ್ಸ್ ಬಿಷ್ಣೋಯ್
Photo: twitter
ಹೊಸದಿಲ್ಲಿ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ, ಕೆನಡಾದಲ್ಲಿ ಶನಿವಾರ ಮುಂಜಾನೆ ಪಂಜಾಬಿ ಗಾಯಕರಾದ ಜಿಪ್ಪಿ ಗ್ರೇವಾಲ್ ಮನೆಯಲ್ಲಿ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿದ್ದಾನೆ. ವ್ಯಾಂಕೋವರ್ ಬಳಿಯ ವೈಟ್ ರಾಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜಿಪ್ಪಿ ಬಾಲಿವುಡ್ ತಾರೆ ಸಲ್ಮಾನ್ ಖಾನ್ ಅವರನ್ನು ಹೊಗಳುವುದನ್ನು ನಿಲ್ಲಿಸಬೇಕು ಎಂದು ಜಿಪ್ಪಿಗೆ ಎಚ್ಚರಿಕೆ ನೀಡುವ ಸಲುವಾಗಿ ಈ ದಾಳಿ ನಡೆಸಿದ್ದಾಗಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೇಳಿಕೊಂಡಿದ್ದಾನೆ.
ಈತ ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಸಲ್ಮಾನ್ ಖಾನ್ ಅವರಿಗೆ ಕೂಡಾ ಎಚ್ಚರಿಕೆ ನೀಡಿದ್ದಾನೆ. ಈ ಘಟನೆಯನ್ನು ಸ್ಥಳೀಯ ಕಾನೂನು ಜಾರಿ ವಿಭಾಗ ಪರಿಶೀಲಿಸುತ್ತಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಗ್ರೇವಾಲ್ ಅವರ ಹೆಸರನ್ನು ಉಲ್ಲೇಖಿಸದೇ, ಕೆನಡಾ ಮಾಧ್ಯಮಗಳು ವರದಿ ಮಾಡಿವೆ.
ಬಿಷ್ಣೋಯಿ ಗುಂಪು ನಿರ್ವಹಿಸುವ ಈ ಫೇಸ್ಬುಕ್ ಖಾತೆಯ ಪೋಸ್ಟ್ ನಲ್ಲಿ, ಇದು ಸಲ್ಮಾನ್ ಖಾನ್ ಗೆ ನೀಡುತ್ತಿರುವ ಸಂದೇಶವಾಗಿದ್ದು, ಖಾನ್ ಸಾಧ್ಯವಾದರೆ ತಮ್ಮ ಸಹೋದರ ಗ್ರೇವಾಲ್ ಅವರನ್ನು ಪಾರು ಮಾಡಲಿ ಎಂದು ಸವಾಲು ಹಾಕಲಾಗಿದೆ.
"ಸಿಧು ಮೂಸೆವಾಲಾ ಸಾವಿನ ಬಗೆಗಿನ ನಿಮ್ಮ ಪ್ರತಿಕ್ರಿಯೆ ನಮ್ಮ ಗಮನದಲ್ಲಿದೆ. ಮಿದ್ದುಖೇರಾದಲ್ಲಿ ವಿಕ್ಕಿ ಜತೆ ನೀವು ನಿಕಟ ನಂಟು ಹೊಂದಿದ್ದೀರಿ. ಆ ಬಳಿಕ ಸಿಧು ಬಗೆಗೆ ತೀವ್ರ ಸಂತಾಪ ಸೂಚಿಸಿದ್ದೀರಿ. ನೀವು ಈಗ ನಮ್ಮ ಕಣ್ಗಾವಲಿನಲ್ಲಿದ್ದೀರಿ. ಈ ಟೀಸರ್ ನೋಡಿ.. ಯಾವುದೇ ದೇಶದಲ್ಲಿ ಆಶ್ರಯ ಪಡೆಯಲು ನೀವು ಮುಕ್ತರು. ಆದರೆ ಸಾವಿಗೆ ವೀಸಾ ಇಲ್ಲ ಎನ್ನುವುದನ್ನು ಮರೆಯಬೇಡಿ" ಎಂದು ಎಚ್ಚರಿಕೆ ನೀಡಲಾಗಿದೆ.
ಈ ಘಟನೆ ಪಂಜಾಬಿ ಸಂಗೀತ ಉದ್ಯಮದಲ್ಲಿ ಆಘಾತ ಮೂಡಿಸಿದೆ. ಜಿಪ್ಪಿ ಗ್ರೇವಾಲ್ ಸುರಕ್ಷತೆ ಬಗ್ಗೆ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಬಿಷ್ಣೋಯಿ ನೀಡಿದ ಈ ಎಚ್ಚರಿಕೆಯು ಪರಿಸ್ಥಿತಿಯ ತೀವ್ರತೆಯನ್ನು ಹೆಚ್ಚಿಸಿದ್ದು, ಇಂಥ ದಾಳಿಯ ಹಿಂದಿನ ಉದ್ದೇಶಗಳ ಬಗ್ಗೆ ಜನಸಾಮಾನ್ಯರು ಆತಂಕ ಪಡುವಂತಾಗಿದೆ.