ವಾಡಿಕೆಗಿಂತ ಕಡಿಮೆ ಮಳೆ: ರೈತರಲ್ಲಿ ಆತಂಕ
ಹೊಸದಿಲ್ಲಿ: ಹವಾಮಾನ ವೈಪರೀತ್ಯ ಪರಿಸ್ಥಿತಿ ಮುಂದುವರಿದಿದ್ದು, ಜುಲೈ ತಿಂಗಳ ಅಂತ್ಯದ ವೇಳೆಗೆ ವಾಡಿಕೆಗಿಂತ ಶೇಕಡ 5ರಷ್ಟು ಅಧಿಕ ಇದ್ದ ಮಳೆ ಪರಿಸ್ಥಿತಿ ಕೇವಲ 15 ದಿನಗಳಲ್ಲಿ ವಾಡಿಕೆಗಿಂತ ಶೇಕಡ 5ರಷ್ಟು ಕಡಿಮೆ ಮಟ್ಟಕ್ಕೆ ಇಳಿದಿದ್ದು, ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ. ಭಾರತದ 717 ಜಿಲ್ಲೆಗಳ ಪೈಕಿ 263 ಜಿಲ್ಲೆಗಳಲ್ಲಿ ಅಂದರೆ ಶೇಕಡ 36ರಷ್ಟು ಜಿಲ್ಲೆಗಳಲ್ಲಿ ಮಳೆ ಅಭಾವ ಶೇಕಡ 20 ರಷ್ಟು ಅಥವಾ ಅಧಿಕ ಇದೆ.
ಮಳೆ ಬಹಳಷ್ಟು ಕಡೆಗಳಲ್ಲಿ ಇದೀಗ ವಿರಾಮ ನೀಡಿದ್ದು, ಮಂಗಳವಾರದ ವೇಳೆಗೆ ಕ್ರೋಢೀಕೃತ ಮಳೆ ಪ್ರಮಾಣ ವಾಡಿಕೆ ಮಳೆಗಿಂತ ಶೇಕಡ 5ರಷ್ಟು ಕಡಿಮೆ ಇದೆ. ದೇಶಾದ್ಯಂತ ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಧೀರ್ಘಾವಧಿ ವಾಡಿಕೆ ಪ್ರಮಾಣಕ್ಕಿಂತ ಶೇಕಡ 35ರಷ್ಟು ಕೊರತೆ ಕಾಣಿಸಿಕೊಂಡಿದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆ ಶೇಕಡ 13ರಷ್ಟು ಅಧಿಕ ಇದ್ದ ಕಾರಣ ಹಿಂದಿನ ಕೊರತೆ ನೀಗಿತ್ತು.
ಪೂರ್ವಭಾರತದ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ಮಳೆ ಅಭಾವ ಪರಿಸ್ಥಿತಿ ಇದ್ದರೆ, ದಕ್ಷಿಣ ರಾಜ್ಯಗಳಲ್ಲಿ ಕೂಡಾ ಮಳೆ ಅಭಾವ ಪರಿಸ್ಥಿತಿ ತೀವ್ರವಾಗುತ್ತಿದೆ. ಆದರೆ ಆಗಸ್ಟ್ 18ರಿಂದ ಮಳೆ ವೇಗ ಪಡೆಯುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಅಂದಾಜಿಸಿದೆ. "ಆಗಸ್ಟ್ ಉತ್ತರಾರ್ಧದಲ್ಲಿ ಉತ್ತಮ ಮಳೆ ಪರಿಸ್ಥಿತಿ ನಿರೀಕ್ಷಿಸಲಾಗಿದೆ. ಆಗಸ್ಟ್ 18ರ ವೇಳೆಗೆ ಮುಂಗಾರು ಪುನಶ್ಚೇತನದ ನಿರೀಕ್ಷೆ ಇದೆ. ಪಶ್ಚಿಮ ಕರಾವಳಿ ಮತ್ತು ಪರ್ಯಾಯದ್ವೀಪ ಪ್ರದೇಶಗಳಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಜತೆಗೆ ಪೂರ್ವ ಹಾಗೂ ಈಶಾನ್ಯ ಮತ್ತು ಕೇಂದ್ರ ಭಾರತದ ಹಲವು ರಾಜ್ಯಗಳಲ್ಲೂ ಮಳೆಯಾಗಲಿದೆ ಎಂದು ಐಎಂಡಿ ವಿಜ್ಞಾನಿ ಡಿ.ಶಿವಾನಂದ ಪೈ ಹೇಳಿದ್ದಾರೆ.
ಎಲ್ನಿನೊ ಪೂರ್ಣಪ್ರಮಾಣದಲ್ಲಿ "ಕಪಲ್ಡ್ ಸಿಸ್ಟಂ" ಆಗಿ ಬೆಳೆದಿದ್ದು, ಆಗಸ್ಟ್- ಸೆಪ್ಟೆಂಬರ್ ಅವಧಿಯಲ್ಲಿ ಮಳೆ ಪ್ರಮಾಣದ ಬಗ್ಗೆ ಆತಂಕದ ಮೋಡ ಕವಿದಿದೆ. ಪೂರ್ವ ಮತ್ತು ಕೇಂದ್ರ ಫೆಸಿಫಿಕ್ ಪ್ರದೇಶದಲಿ ಸಾಗರ ಬಿಸಿಯಾಗುವಿಕೆಗೆ ಸಂಬಂಧಿಸಿದಂತೆ ಬದಲಾವಣೆ ಕಂಡುಬಂದಿದ್ದು, ಇದು ಈ ಪ್ರದೇಶದಲ್ಲಿ ಗಾಳಿಯ ವಿಧದಲ್ಲಿ ಬದಲಾವಣೆಗೂ ಕಾರಣವಾಗಲಿದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಏಜೆನ್ಸಿಗಳು ಅಂದಾಜಿಸಿವೆ. ಈ ಬೆಳವಣಿಗೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಪರಿಣಾಮ ಬೀರಲಿದೆ ಎನ್ನುವುದು ತಜ್ಞರ ಅಭಿಮತ.