ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಜಾಗೊಳಿಸಲು ಆಗ್ರಹಿಸಿ ಐಆರ್ ಎಸ್ ಅಧಿಕಾರಿಯಿಂದ ರಾಷ್ಟ್ರಪತಿಗೆ ಪತ್ರ
Photo: twitter.com/nsitharaman
ಚೆನ್ನೈ: ಚೆನ್ನೈ ಉತ್ತರ ವಿಭಾಗದ ಜಿಎಸ್ ಟಿ ಮತ್ತು ಸೆಂಟ್ರಲ್ ಎಕ್ಸೈಸ್ ಇಲಾಖೆಯ ಡೆಪ್ಯುಟಿ ಆಯುಕ್ತ ಬಿ.ಬಾಲಮುರುಗನ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
2021ರಲ್ಲಿ ಸೇಲಂ ಜಿಲ್ಲೆಯ ಅಟ್ಟೂರಿನ ಕನ್ನೈಯನ್ ಹಾಗೂ ಕೃಷ್ಣನ್ ಎಂಬ ಇಬ್ಬರು ರೈತರಿಗೆ ಜಾರಿ ನಿರ್ದೇಶನಾಲಯವು ನೋಟಿಸ್ ನೀಡಿದ್ದ ಪ್ರಕರಣವನ್ನು ಪತ್ರದಲ್ಲಿ ಉಲ್ಲೇಖಿಸಿರುವ ಬಾಲಮುರುಗನ್, ʼಜಾರಿ ನಿರ್ದೇಶನಾಲಯವು ಬಿಜೆಪಿಯ ಕೈಗೊಂಬೆಯಾಗಿರುವುದನ್ನು ಈ ಪ್ರಕರಣ ತೋರಿಸಿದೆ. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿಯು ಈ.ಡಿ ಯನ್ನು ನೀತಿ ಜಾರಿ ನಿರ್ದೇಶನಾಲಯವನ್ನಾಗಿ ಪರಿವರ್ತಿಸಿದೆʼ ಎಂದು ಆರೋಪಿಸಿದ್ದಾರೆ.
ʼಬಡ, ಪರಿಶಿಷ್ಟ ರೈತರಿಗೆ ನ್ಯಾಯ ಒದಗಿಸುವುದಕ್ಕಾಗಿ ಹಾಗೂ ಜಾರಿ ನಿರ್ದೇಶನಾಲಯವನ್ನು ಉಳಿಸುವುದಕ್ಕಾಗಿ ನಿರ್ಮಲಾ ಸೀತಾರಾಮನ್ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕುʼ ಎಂದು ಬಾಲಮುರುಗನ್ ಒತ್ತಾಯಿಸಿದ್ದಾರೆ.
ರೈತರಾದ ಕನ್ನೈಯನ್ ಹಾಗೂ ಕೃಷ್ಣನ್ ತಮ್ಮ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ನಿರ್ಮಿಸಿದ್ದ ಪರಿಣಾಮ ವಿದ್ಯತ್ ತಗುಲಿ ಎರಡು ಕಾಡುಕೋಣಗಳು ಮೃತಪಟ್ಟಿದ್ದವು. ಇದಕ್ಕಾಗಿ ಇಬ್ಬರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 2017ರಡಿ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ, ಅಟ್ಟೂರು ನ್ಯಾಯಾಲಯವು ಈ ಇಬ್ಬರು ರೈತರನ್ನು ಖುಲಾಸೆಗೊಳಿಸಿತ್ತು.