ದೆಹಲಿ ಅಬಕಾರಿ ನೀತಿ ಪ್ರಕರಣ: ಆಪ್ ಸಂಸದ ಸಂಜಯ್ ಸಿಂಗ್ ಐದು ದಿನ ಜಾರಿ ನಿರ್ದೇಶನಾಲಯದ ವಶಕ್ಕೆ
ಚಿತ್ರ- ಪಿಟಿಐ
ಹೊಸ ದಿಲ್ಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿನ್ನೆಯಷ್ಟೆ ಬಂಧನಕ್ಕೊಳಗಾಗಿದ್ದ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ರನ್ನು ದಿಲ್ಲಿಯ ನ್ಯಾಯಾಲಯವೊಂದು ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ ಎಂದು ndtv.com ವರದಿ ಮಾಡಿದೆ.
ಉದ್ಯಮಿಯೊಬ್ಬರು ಸಂಜಯ್ ಸಿಂಗ್ ಅವರಿಗೆ ಮೂರು ಕೋಟಿ ರೂ. ಹಣವನ್ನು ನೀಡಿದ್ದು, ಈ ಹಣವನ್ನು ದಿಲ್ಲಿ ಅಬಕಾರಿ ನೀತಿ ಪ್ರಕರಣದ ಭಾಗವಾಗಿ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿದೆ.
ಸದ್ಯ ಸಾಕ್ಷಿದಾರರಾಗಿ ಬದಲಾಗಿರುವ, ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿರುವ ದಿಲ್ಲಿಯ ಉದ್ಯಮಿ ದಿನೇಶ್ ಅರೋರಾರ ಹೇಳಿಕೆಯನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಈ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ಮಂಡಿಸಿದೆ.
ಆಮ್ ಆದ್ಮಿ ಪಕ್ಷದ ಸಂಸದರ ನಿವಾಸದಿಂದ ದಿಜಿಟಲ್ ಸಾಕ್ಷ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿದೆ.