ದೇಶದ ಮುಸ್ಲಿಮರ ಮನ್ ಕಿ ಬಾತ್ ಆಲಿಸಿ: ಪ್ರಧಾನಿ ಮೋದಿಗೆ ಶಾಹಿ ಇಮಾಮ್ ಮನವಿ
ಹೊಸದಿಲ್ಲಿ: ದೇಶದಲ್ಲಿ 'ದ್ವೇಷ ಬಿರುಗಾಳಿ'ಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ, ಮುಸ್ಲಿಮರ ಮನ್ ಕಿ ಬಾತ್ ಆಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರದ ಜುಮಾ ನಮಾಝ್ ವೇಳೆ ಮಾತನಾಡಿದ ಶಾಹಿ ಇಮಾಮ್, ಇತ್ತೀಚೆಗೆ ನಡೆದ ನೂಹ್ ಹಿಂಸಾಚಾರವನ್ನು ಮತ್ತು ಚಲಿಸುವ ರೈಲಿನಲ್ಲಿ ರೈಲ್ವೆ ಪೊಲೀಸ್ ಪೇದೆ ನಾಲ್ಕು ಮಂದಿಯನ್ನು ಹತ್ಯೆ ಮಾಡಿರುವ ಪ್ರಕರಣವನ್ನು ಉಲ್ಲೇಖಿಸಿರುವ ಬುಖಾರಿ, "ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಸಮುದಾಯದ ಬುದ್ಧಿಜೀವಿಗಳ ಜತೆ ಈ ಬಗ್ಗೆ ಸಂವಾದ ನಡೆಸಬೇಕು" ಎಂದು ಸಲಹೆ ಮಾಡಿದರು.
ದೇಶದಲ್ಲಿ ಪ್ರಸ್ತುತ ಇರುವ ಸ್ಥಿತಿಗತಿಯ ಹಿನ್ನೆಲೆಯಲ್ಲಿ ನಾನು ಮಾತನಾಡುವುದು ಅನಿವಾರ್ಯವಾಗಿದೆ ಎಂದು ಬುಖಾರಿ ಸ್ಪಷ್ಟಪಡಿಸಿದರು.
ದೇಶದಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ ಹಾಗೂ ದ್ವೇಷದ ಬಿರುಗಾಳಿ ದೇಶದಲ್ಲಿ ಶಾಂತಿಗೆ ಗಂಭೀರ ಅಪಾಯ ತಂದಿದೆ ಎಂದು ಬುಖಾರಿ ವಿಶ್ಲೇಷಿಸಿದರು.
"ನೀವು ನಿಮ್ಮ ಮನ್ ಕಿ ಬಾತ್ ಹೇಳುತ್ತಿದ್ದೀರಿ. ಆದರೆ ನಿವು ಮುಸ್ಲಿಮರ ಮನ್ ಕಿ ಬಾತ್ ಆಲಿಸಬೇಕು. ಇತ್ತೀಚಿನ ದಿನಗಳಲ್ಲಿ ಮುಸ್ಲಿಮರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ಅವರ ಭವಿಷ್ಯದ ಬಗ್ಗೆ ಆತಂಕ ಇದೆ" ಎಂದು ಬುಖಾರಿ ವಿವರಿಸಿದರು.