ಉತ್ತರ ಪ್ರದೇಶ: ಬಿಜೆಪಿ ನಾಯಕನಿಗೆ ಸ್ಥಳೀಯರಿಂದ ಥಳಿತ; ಪ್ರಕರಣ ದಾಖಲು
ಲಕ್ನೋ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಬಿಜೆಪಿ ನಾಯಕನೊಬ್ಬನನ್ನು ದೊಣ್ಣೆಗಳು ಮತ್ತು ಸಲಾಕೆಗಳಿಂದ ಭೀಕರವಾಗಿ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ಘಟನೆಯು ಲಾಡ್ಪುರ ಗ್ರಾಮದ ಕಸ್ನಾ ಪ್ರದೇಶದಲ್ಲಿ ನಡೆದಿದೆ ಎಂದು freepressjournal.in ವರದಿ ಮಾಡಿದೆ.
ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಘಟನೆಯ ವಿಡಿಯೊದಲ್ಲಿ, ಸಲಾಕೆಗಳು ಹಾಗೂ ದೊಣ್ಣೆಗಳಿಂದ ನಿರ್ದಯವಾಗಿ ಥಳಿಸುತ್ತಿರುವ ಜನರಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಓಡುತ್ತಿರುವ ಬಿಜೆಪಿ ನಾಯಕನೊಬ್ಬನನ್ನು ಕಾಣಬಹುದಾಗಿದೆ. ಆ ನಾಯಕ ನೆಲದ ಮೇಲೆ ಬಿದ್ದರೂ ಆತನನ್ನು ಬಿಡದೆ ಆ ಗುಂಪು ಆತನ ಮೇಲೆ ಗುದ್ದಿನ ಸುರಿಮಳೆ ಸುರಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಕೆಲವು ವಿಷಯಗಳ ಕುರಿತು ಗ್ರಾಮದಲ್ಲಿ ಎರಡು ಗುಂಪಿನ ನಡುವೆ ವ್ಯಾಜ್ಯವಿದ್ದುದರಿಂದ ಬಿಜೆಪಿ ನಾಯಕನನ್ನು ಅಟ್ಟಾಡಿಸಿಕೊಂಡು ಹೊಡೆಯಲಾಗಿದೆ ಎಂದು ಹೇಳಲಾಗಿದೆ. ಸುದ್ದಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆತನನ್ನು ರಕ್ಷಿಸಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ರಾಹುಲ್ ಪಂಡಿತ್ ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ, ಘಟನೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ಈ ಸಂಬಂಧ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.