ಲೋಕಸಭಾ ಚುನಾವಣೆ: ಬಂಗಾಳದಲ್ಲಿ ಸ್ಪರ್ಧೆಗಿಳಿದ ವಿಚ್ಛೇದಿತ ದಂಪತಿ!
Photo: NDtv
ಕೊಲ್ಕತ್ತಾ: ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ವಿಚ್ಛೇದಿತ ಪತಿ- ಪತ್ನಿ ಪರಸ್ಪರ ಸೆಣೆಸಲು ಅನುವು ಮಾಡಿಕೊಟ್ಟಿದೆ. ಸುಜಾತಾ ಮಂಡಲ್ ಅವರು ತಮ್ಮ ಮಾಜಿ ಪತಿ ಹಾಗೂ ಬಿಷ್ಣುಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೌಮಿತ್ರಾ ಖಾನ್ ವಿರುದ್ಧ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಬಿಷ್ಣುಪುರದ ಸೌಮಿತ್ರಾ ಖಾನ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಈ ತಿಂಗಳ ಆರಂಭದಲ್ಲಿ ಘೋಷಿಸಲಾಗಿತ್ತು. ಇಂದು ಮಂಡಲ್ ಅವರನ್ನು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದ 2021ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ದಂಪತಿ ಬೇರ್ಪಟ್ಟಿತ್ತು. ಪತ್ನಿ ತೃಣಮೂಲ ಕಾಂಗ್ರೆಸ್ ಸದಸ್ಯೆಯಾಗಿ ರಾಜಕೀಯಕ್ಕೆ ಧುಮುಕಿದ ತಕ್ಷಣ ಕ್ಯಾಮೆರಾ ಮುಂದೆಯೇ ಖಾನ್ ವಿಚ್ಛೇದನ ಘೋಷಿಸಿದ್ದರು.
ಬಿಷ್ಣುಪುರ ಮೂಲದ ಖಾನ್ 2019ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಆ ಸಮಯದಲ್ಲಿ ಅವರ ಪತ್ನಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದರು. ರಾಜ್ಯದ 42 ಸ್ಥಾನಗಳಿಗೆ ತೃಣಮೂಲ ಕಾಂಗ್ರೆಸ್ ಭಾನುವಾರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಪಕ್ಷ ಮುಂದಾಗಿದೆ.
ಚುನಾವಣಾ ಫಲಿತಾಂಶ ಬಂದ ಬಳಿಕವಷ್ಟೇ ವಿರೋಧ ಪಕ್ಷಗಳ ಕೂಟವನ್ನು ಸೇರುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ.