ಲೋಕಸಭಾ ಚುನಾವಣೆ: ಮತದಾನ ಪ್ರಮಾಣ ಮತ್ತೆ ಕುಸಿತ
ಹೊಸದಿಲ್ಲಿ: ಮೂರನೇ ಹಂತದ ಮತದಾನ ನಡೆದ 93 ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕಳೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಶೇಕಡ 1.5 ರಷ್ಟು ಕಡಿಮೆಯಾಗಿದೆ. 2019ರಲ್ಲಿ ಈ ಕ್ಷೇತ್ರಗಳಲ್ಲಿ ಶೇಕಡ 66ರಷ್ಟು ಮತದಾನವಾಗಿದ್ದರೆ, ಈ ಬಾರಿ 64.5ಕ್ಕೆ ಕುಸಿದಿದೆ. 543 ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನ ಪೂರ್ಣಗೊಂಡಂತಾಗಿದೆ.
ಮೊದಲ ಎರಡು ಹಂತಗಳಂತೆ ಮೂರನೇ ಹಂತದಲ್ಲಿ ಕೂಡಾ ಮತದಾನ ಪ್ರಮಾಣ ಇಳಿಕೆಯಾಗಿದ್ದು, ಅಂತರ ಮಾತ್ರ ಕಡಿಮೆಯಾಗಿರುವುದು ಸಮಾಧಾನಕರ ಅಂಶ. ಅಸ್ಸಾಂನಲ್ಲಿ ಅತ್ಯಧಿಕ ಅಂದರೆ ಶೇಕಡ 81.7ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ರಾತ್ರಿ 11.45ಕ್ಕೆ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಉತ್ತರ ಪ್ರದೇಶದ 10 ಕ್ಷೇತ್ರಗಳಲ್ಲಿ ಅತ್ಯಂತ ಕನಿಷ್ಠ ಅಂದರೆ ಶೇಕಡ 57.3ರಷ್ಟು ಮತದಾನವಾಗಿದೆ. ಈ ಕ್ಷೇತ್ರಗಳಲ್ಲಿ ಕಳೆದ ಬಾರಿ ಶೇಕಡ 60ರಷ್ಟು ಮತದಾನವಾಗಿತ್ತು. ಉಳಿದಂತೆ ಬಿಹಾರ (58.2) ಮತ್ತು ಗುಜರಾತ್ (ಶೇಕಡ 59.2) ಕೂಡಾ ಕಡಿಮೆ ಮತದಾನ ದಾಖಲಿಸಿವೆ.
ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಎಲ್ಲ ಮೂರು ಹಂತಗಳಲ್ಲಿ ಮತದಾನ ಪ್ರಮಾಣ ಇಳಿಕೆಯಾಗಿದೆ ಎಂದು ಚುನಾವಣಾ ವಿಶ್ಲೇಕರು ಹೇಳಿದ್ದಾರೆ. "ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗ ಹಲವು ಪ್ರಯತ್ನಗಳನ್ನು ಮಾಡಿದರೂ ಏರಿಕೆಯಾಗಿಲ್ಲ" ಎಂದು ಮೂಲಗಳು ಹೇಳಿವೆ. ಛತ್ತೀಸ್ಗಢ, ಕರ್ನಾಟಕ ಮತ್ತು ಗೋವಾದಲ್ಲಿ ಮತದಾನ ಪ್ರಮಾಣ ಮೂರನೇ ಹಂತದಲ್ಲಿ ಏರಿಕೆಯಾಗಿದೆ.
ಮೂರನೇ ಹಂತದ ಮುಕ್ತಾಯದೊಂದಿಗೆ 20 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 283 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ.