ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ; ಶೇಕಡ 50ರಷ್ಟು ಹಾಲಿ ಸಂಸದರಿಗೆ ಕೊಕ್
Photo: twitter.com/TheSiasatDaily
ಹೊಸದಿಲ್ಲಿ: ಬಿಜೆಪಿ ವತಿಯಿಂದ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, 72 ಸ್ಥಾನಗಳ ಪೈಕಿ ಶೇಕಡ 50ರಷ್ಟು ಹಾಲಿ ಸಂಸದರನ್ನು ಪಕ್ಷ ಕೈಬಿಟ್ಟಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ, ಅನುರಾಗ್ ಠಾಕೂರ್ ಹಾಗೂ ರಾವ್ ಇಂದ್ರಜಿತ್ ಸಿಂಗ್ ಸ್ಥಾನ ಉಳಿಸಿಕೊಂಡಿದ್ದಾರೆ. ಹರ್ಯಾಣದ ನಿರ್ಗಮಿತ ಸಿಎಂ ಮಹೋಹರ ಲಾಲ್ ಖಟ್ಟರ್ ಮತ್ತು ಉತ್ತರಾಖಂಡದ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೆಸರು ಪಟ್ಟಿಯಲ್ಲಿದೆ.
ಸ್ಥಾನ ಕಳೆದುಕೊಂಡ ಪ್ರಮುಖರಲ್ಲಿ ಕರ್ನಾಟಕದ ಮಾಜಿ ಸಿಎಂ ಸದಾನಂದ ಗೌಡ (ಬೆಂಗಳೂರು ಉತ್ತರ) ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ (ದಕ್ಷಿಣ ಕನ್ನಡ), ದರ್ಶನಾ ಝರ್ದೋಸ್ (ಸೂರತ್) ಸೇರಿದ್ದಾರೆ. ಕರ್ನಾಟಕದ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದ್ದು, ಈ ಪೈಕಿ 10 ಮಂದಿ ಹಾಲಿ ಸಂಸದರು ಸ್ಥಾನ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಕ್ರಮವಾಗಿ 7 ಹಾಗೂ 5 ಮಂದಿಗೆ ಕೊಕ್ ನೀಡಲಾಗಿದೆ.
ವಾಯವ್ಯ ದೆಹಲಿಯಲ್ಲಿ ಯೋಗೀಂದ್ರ ಚಂದೂಲಿಯಾ ಬದಲು ಸೂಫಿ ಗಾಯಕ ಹನ್ಸರಾಜ್ ಹನ್ಸ್ ಅವರನ್ನು ಕಣಕ್ಕೆ ಇಳಿಸಿದ್ದರೆ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರತಿನಿಧಿಸುತ್ತಿದ್ದ ದೆಹಲಿ ಪೂರ್ವ ಕ್ಷೇತ್ರಕ್ಕೆ ಹರ್ಷ ಮಲ್ಹೋತ್ರಾ ಪಕ್ಷದ ಅಭ್ಯರ್ಥಿಯಾಗಿರುತ್ತಾರೆ. ದೆಹಲಿಯ ಏಳು ಕ್ಷೇತ್ರಗಳ ಪೈಕಿ ಆರು ಮಂದಿ ಹಾಲಿ ಸಂಸದರು ಸ್ಥಾನ ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ಮನೋಜ್ ತಿವಾರಿ ಸ್ಥಾನ ಗಳಿಸಿಕೊಂಡ ಏಕೈಕ ಹಾಲಿ ಸಂಸದರು.
ಉತ್ತರ ಮುಂಬೈ ಸಂಸದ ಗೋಪಾಲ್ ಶೆಟ್ಟಿ ಕೇಂದ್ರ ಸಚಿವ ಗೋಯಲ್ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಈಶಾನ್ಯ ಮುಂಬೈನಲ್ಲಿ ಮನೋಜ್ ಕೊಟಾಕ್ ಬದಲು ಮಿಹಿರ್ ಕೊಟೇಚಾ ಕಣಕ್ಕೆ ಇಳಿದಿದ್ದಾರೆ. ಚಂದ್ರಾಪುರದಲ್ಲಿ ಹಿರಿಯ ಓಬಿಸಿ ನಾಯಕ ಹನ್ಸರಾಜ್ ಅಹೀರ್ ಅವರ ಬದಲು ಸುಧೀರ್ ಮುಂಗಂಟಿಯವಾರ್ ಅವರಿಗೆ ಪಕ್ಷ ಮಣೆ ಹಾಕಿದೆ.