ಲೋಕಸಭಾ ಚುನಾವಣೆ: ಮೂವರು ಶಾಸಕರು, ಮಾಜಿ ಸಚಿವನಿಗೆ ಮಣೆ ಹಾಕಿದ ಎಎಪಿ

Photo: twitter.com/AAP
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಮುಂಬರುವ ಲೋಕಸಭಾ ಚುನಾವಣೆಗೆ ದೆಹಲಿಯ ನಾಲ್ಕು ಹಾಗೂ ಹರ್ಯಾಣದ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಮಂಗಳವಾರ ಪ್ರಕಟಿಸಿದೆ. ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಕಾಂಗ್ರೆಸ್ ಜತೆಗೆ ಸ್ಥಾನ ಹಂಚಿಕೆ ಒಪ್ಪಂದದೊಂದಿಗೆ ಎಎಪಿ ಚುನಾವಣೆ ಎದುರಿಸುತ್ತಿದೆ.
ದೆಹಲಿ ಪೂರ್ವ, ದಕ್ಷಿಣ ಹಾಗೂ ನವದೆಹಲಿ ಕ್ಷೇತ್ರಗಳಿಂದ ಮೂವರು ಶಾಸಕರನ್ನು ಕಣಕ್ಕೆ ಇಳಿಸಿದ್ದರೆ, ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷ ಸೇರಿರುವ ಮಹಾಬಲ ಮಿಶ್ರ ಪಶ್ಚಿಮ ದೆಹಲಿ ಕ್ಷೇತ್ರದ ಸ್ಪರ್ಧಿ.
ದೆಹಲಿ ಪೂರ್ವ ಕ್ಷೇತ್ರದಿಂದ ಪರಿಶಿಷ್ಟ ಜಾತಿಗೆ ಸೇರಿದ ಕೊಂಡ್ಲಿ ಶಾಸಕ ಕುಲದೀಪ್ ಕುಮಾರ್ ಕಣಕ್ಕೆ ಇಳಿಯಲಿದ್ದು, ಇದನ್ನು ಕ್ರಾಂತಿಕಾರಿ ಹೆಜ್ಜೆ ಎಂದು ಕೇಜ್ರಿವಾಲ್ ಎಕ್ಸ್ ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಹೇಳಿದ್ದಾರೆ. ಅಂಬೇಡ್ಕರ್ ಅವರ ಕನಸನ್ನು ಆಮ್ ಆದ್ಮಿ ಪಕ್ಷ ಮಾತ್ರವೇ ನನಸುಗೊಳಿಸುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಹರ್ಯಾಣ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸುಶೀಲ್ ಗುಪ್ತಾ ಕುರುಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಮೂರು ಬಾರಿಯ ಮಾಳವೀಯ ನಗರ ಶಾಸಕ ಸೋಮನಾಥ್ ಭಾರ್ತಿ ಹೊಸದಿಲ್ಲಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿದ್ದು, ತುಘಲಕಾಬಾದ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾದ ಶಿವರಾಮ್ ಪಹಲ್ವಾನ್ ದಕ್ಷಿಣ ದೆಹಲಿ ಕ್ಷೇತ್ರದ ಅಭ್ಯರ್ಥಿ.
ಎಎಪಿಯ ಕುರುಕ್ಷೇತ್ರ ಅಭ್ಯರ್ಥಿ ಸುಶೀಲ್ ಗುಪ್ತಾ ಕಾಂಗ್ರೆಸ್ ಅಭ್ಯರ್ಥಿಯಾಗಿ 2013ರ ಚುನಾವಣೆಯಲ್ಲಿ ದೆಹಲಿಯ ಮೋತಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳಿಕ ಎಎಪಿ ಸೇರಿದ ಅವರನ್ನು 2018ರಲ್ಲಿ ರಾಜ್ಯಸಭೆಗೆ ಅಯ್ಕೆ ಮಾಡಲಾಗಿತ್ತು. 15 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಹಲವು ಶಿಕ್ಷಣ ಸಂಸ್ಥೆಗಳನ್ನು ಅವರು ದೆಹಲಿ ಹಾಗೂ ಹರ್ಯಾಣದಲ್ಲಿ ಹೊಂದಿದ್ದಾರೆ.
ದೆಹಲಿಯ ನೈರುತ್ಯ ದೆಹಲಿ (ಮೀಸಲು), ಈಶಾನ್ಯ ಹಾಗೂ ಚಾಂದನಿ ಚೌಕ್ ಕ್ಷೇತ್ರಗಳಲ್ಲಿ ಮತ್ತು ಹರ್ಯಾಣದ ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.