ಚುನಾವಣಾ ಆಯೋಗದ ‘ನಿಮ್ಮ ಅಭ್ಯರ್ಥಿಯನ್ನು ತಿಳಿದುಕೊಳ್ಳಿ’ ಆ್ಯಪ್ ಕುರಿತು ನಿಮಗೆ ಗೊತ್ತಿರಬೇಕಾದ ಮಾಹಿತಿ ಇಲ್ಲಿದೆ...
ಹೊಸದಿಲ್ಲಿ: ಚುನಾವಣಾ ಆಯೋಗವು ಲೋಕಸಭಾ ಚುನಾವಣೆಗಳನ್ನು ಘೋಷಿಸುವ ಮುನ್ನ ‘ನೋ ಯುವರ್ ಕ್ಯಾಂಡಿಡೇಟ್ (ನಿಮ್ಮ ಅಭ್ಯರ್ಥಿಯನ್ನು ತಿಳಿದುಕೊಳ್ಳಿ)’ ಎಂಬ ನೂತನ ಆ್ಯಪ್‌ನ್ನು ಬಿಡುಗಡೆಗೊಳಿಸಿದೆ.
ತಮ್ಮ ಕ್ಷೇತ್ರದಲ್ಲಿಯ ಯಾವುದೇ ಅಭ್ಯರ್ಥಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆಯೇ ಎನ್ನುವುದನ್ನು ತಿಳಿದುಕೊಳ್ಳಲು ಮತದಾರರಿಗೆ ನೆರವಾಗುವುದು ಈ ಆ್ಯಪ್‌ನ ಉದ್ದೇಶವಾಗಿದೆ.
ತಮ್ಮ ಪ್ರತಿನಿಧಿಗಳ ಕುರಿತು ಮಾಹಿತಿಯುಕ್ತ ನಿರ್ಧಾರಗಳನ್ನು ಕೈಗೊಳ್ಳಲು ಮತದಾರರಿಗೆ ಅವಕಾಶ ನೀಡುವ ಮೂಲಕ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಹೆಚ್ಚಿಸುವುದು ಆ್ಯಪ್‌ನ ಗುರಿಯಾಗಿದೆ.
‘ನೋ ಯುವರ್ ಕ್ಯಾಂಡಿಡೇಟ್’ ಅಥವಾ ಕೆವೈಸಿ ಆ್ಯಪ್ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಲು ಮತದಾರರು ಚುನಾವಣಾ ವಿಧ ಮತ್ತು ಮತಕ್ಷೇತ್ರದ ಹೆಸರನ್ನು ಆಯ್ಕ ಮಾಡಿಕೊಳ್ಳುವುದು ಅಗತ್ಯವಾಗುತ್ತದೆ. ಅವರು ಹೆಸರಿನ ಮೂಲಕ ನಿರ್ದಿಷ್ಟ ಅಭ್ಯರ್ಥಿಯ ಬಗ್ಗೆಯೂ ನೋಡಬಹುದು. ಸದ್ರಿ ಅಭ್ಯರ್ಥಿಯು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದರೆ ಆ್ಯಪ್ ಆ ಕುರಿತು ಮಾಹಿತಿಯನ್ನು ನೀಡುತ್ತದೆ.
ಅಭ್ಯರ್ಥಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳು,ಅವುಗಳ ಸ್ಥಿತಿಗತಿ ಮತ್ತು ಅಪರಾಧಗಳ ಸ್ವರೂಪ ಇವೆಲ್ಲವೂ ಈ ಆ್ಯಪ್‌ನಲ್ಲಿ ಲಭ್ಯವಿದೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಕ್ಯೂಆರ್ ಕೋಡ್ ಮೂಲಕ ಆ್ಯಂಡ್ರಾಯ್ಡ್ ಮತ್ತು ಐಒಎಸ್‌ಗಳಿಗಾಗಿ ಕೆವೈಸಿ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರ್ಯಾಯವಾಗಿ ಬಳಕೆದಾರರು ಗೂಗಲ್ ಪ್ಲೇಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ಗೆ ಭೇಟಿ ನೀಡಿ ಕೆವೈಸಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮತದಾರರು ಈಗ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಜೊತೆಗೆ ಅವರ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಸ್ವತಃ ಪರಿಶೀಲಿಸಬಹುದು. ಈ ಸಂಬಂಧ ಎಲ್ಲ ಮಾಹಿತಿಗಳನ್ನು ಆ್ಯಪ್‌ನಲ್ಲಿ ಲಭ್ಯವಾಗಿಸಲಾಗುತ್ತದೆ. ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಮೂರು ಬಾರಿ ವೃತ್ತಪತ್ರಿಕೆಗಳಲ್ಲಿ ಅಥವಾ ಟಿವಿ ವಾಹಿನಿಗಳಲ್ಲಿ ಪ್ರಕಟಿಸುವುದು ಅಗತ್ಯವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂತಹ ಕಳಂಕಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಪಕ್ಷಗಳು ತಾವು ಇತರರನ್ನು ಬಿಟ್ಟು ಅವರನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದು ಎಂಬ ಬಗ್ಗೆ ವಿವರಣೆಯನ್ನು ನೀಡಬೇಕಾಗುತ್ತದೆ. ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ಆಯ್ಕೆಗೆ ಕಾರಣವನ್ನು ಅವು ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ ಎಂದೂ ಕುಮಾರ್ ವಿವರಿಸಿದರು.