ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ರೂ. 200 ಕಡಿತ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಹಲವು ವರ್ಷಗಳ ಹಿಂದೆ ಗೃಹಬಳಕೆ ಅಡಿಗೆ ಅನಿಲ (ಎಲ್ಪಿಜಿ)ದ ಮೇಲಿನ ಸಬ್ಸಿಡಿಯನ್ನು ಸದ್ದಿಲ್ಲದೆ ಹಿಂದೆಗೆದುಕೊಂಡಿದ್ದ ಸರಕಾರವು ಇದೀಗ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪ್ರತಿ ಸಿಲಿಂಡರ್ ಗೆ 200 ರೂ.ಸಬ್ಸಿಡಿ ನೀಡಲು ನಿರ್ಧರಿಸಿದೆ.
ಮಂಗಳವಾರ ಇಲ್ಲಿ ಕೇಂದ್ರ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ವಿವರಗಳನ್ನು ಸುದ್ದಿಗಾರರಿಗೆ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಅವರು, ಎಲ್ಲ ಬಳಕೆದಾರರಿಗೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ. ತಗ್ಗಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಸರಕಾರವು ಶೂನ್ಯ ವೆಚ್ಚದಲ್ಲಿ ಇನ್ನೂ 75 ಲಕ್ಷ ಉಜ್ವಲ ಅನಿಲ ಸಂಪರ್ಕಗಳನ್ನು ನೀಡಲಿದೆ ಎಂದರು.
ಸರಕಾರವು 2-3 ವರ್ಷಗಳ ಹಿಂದೆಯೇ ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ಎಲ್ಪಿಜಿ ಸಬ್ಸಿಡಿಯನ್ನು ರವಾನಿಸುವುದನ್ನು ನಿಲ್ಲಿಸಿತ್ತು, ಆದರೆ ಈ ಕ್ರಮವನ್ನು ಎಂದೂ ದೃಢಪಡಿಸಿರಲಿಲ್ಲ. ಉಜ್ವಲ ಬಳಕೆದಾರರು ಪ್ರತಿ ಸಿಲಿಂಡರ್ಗೆ 400 ರೂ.ಗಳ ಸಬ್ಸಿಡಿಯನ್ನು ಪಡೆಯಲಿದ್ದಾರೆ.
ಸಬ್ಸಿಡಿ ಮರುಸ್ಥಾಪನೆಯಿಂದ ಎಷ್ಟು ವೆಚ್ಚವಾಗಲಿದೆ ಎಂಬ ಪ್ರಶ್ನೆಗೆ ಠಾಕೂರ್ ಅದನ್ನು ಸಂಬಂಧಿತ ಸಚಿವಾಲಯವು ಬಹಿರಂಗಗೊಳಿಸಲಿದೆ ಎಂದು ಉತ್ತರಿಸಿದರು. ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ಸಬ್ಸಿಡಿ ಹಣವನ್ನು ಕಳುಹಿಸುತ್ತಿರುವುದಾಗಿ ಕಳೆದ ತಿಂಗಳಷ್ಟೇ ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ ಹೇಳಿಕೊಂಡಿತ್ತು. ಆದರೆ ವರ್ಷಗಳಿಂದಲೂ ತಮಗೆ ಸಬ್ಸಿಡಿ ದೊರೆಯುತ್ತಿಲ್ಲ ಎಂದು ಹೆಚ್ಚಿನ ಬಳಕೆದಾರರು ದೂರಿದ್ದರು.
ಕಳೆದ ವರ್ಷದ ಮೇ ತಿಂಗಳಿನಲ್ಲಿ ಪ್ರತಿ ಬ್ಯಾರೆಲ್ಗೆ 118 ಡಾ.ಗಳ ಗರಿಷ್ಠ ಮಟ್ಟವನ್ನು ತಲುಪಿದ ಬಳಿಕ ಜಾಗತಿಕ ಕಚ್ಚಾ ತೈಲ ಬೆಲೆಗಳು ಗಣನೀಯವಾಗಿ ಇಳಿದಿದ್ದರೂ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಏಕೆ ಇಳಿಸುತ್ತಿಲ್ಲ ಎಂದು ಕಳೆದ ತಿಂಗಳು ಸರಕಾರವನ್ನು ಪ್ರಶ್ನಿಸಲಾಗಿತ್ತು. ಕಳೆದ ಏಳು ತಿಂಗಳುಗಳಿಂದಲೂ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ಗೆ 60ರಿಂದ 80 ಡಾ.ಗಳ ನಡುವೆ ಸ್ಥಿರವಾಗಿವೆ.
ಇದಕ್ಕೆ ವ್ಯತಿರಿಕ್ತವಾಗಿ ಚೆನ್ನೈನಲ್ಲಿ ಪ್ರತಿ ಎಲ್ಪಿಜಿ ಸಿಲಿಂಡರ್ ಬೆಲೆ ಕಳೆದೊಂದು ವರ್ಷದಿಂದಲೂ ಸ್ಥಿರವಾಗಿದೆ ಅಥವಾ ಹೆಚ್ಚುತ್ತಿದೆ. ಉದಾಹರಣೆಗೆ 1,068.50 ರೂ.ನಲ್ಲಿ ಸ್ಥಿರವಾಗಿದ್ದ ಪ್ರತಿ ಸಿಲಿಂಡರ್ ಬೆಲೆ ಈ ವರ್ಷದ ಫೆಬ್ರವರಿಯಲ್ಲಿ 1118.50 ರೂ.ಗೆ ಏರಿಕೆಯಾಗಿದ್ದು,ಆಗಿನಿಂದ ಅದೇ ಮಟ್ಟದಲ್ಲಿ ಉಳಿದುಕೊಂಡಿದೆ.
ದಿಲ್ಲಿಯಲ್ಲಿ ಮೇ 2020ರಲ್ಲಿ 14.2 ಕೆ.ಜಿ.ತೂಕದ ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗೆ 581 ರೂ.ಇದ್ದ ಬೆಲೆ ಆಗಿನಿಂದ ನಿರಂತರವಾಗಿ ಹೆಚ್ಚುತ್ತಲೇ ಇದ್ದು ಈ ವರ್ಷದ ಮಾರ್ಚ್ನಲ್ಲಿ 1,103 ರೂ.ಗೆ ತಲುಪಿತ್ತು. ಕಚ್ಚಾ ತೈಲ ಬೆಲೆಗಳು ತೀವ್ರ ಕುಸಿತವಾಗಿದ್ದರೂ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಸಲಾಗಿರಲಿಲ್ಲ.
2022ರಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ಅವಧಿಯಲ್ಲಿನ ನಷ್ಟಗಳನ್ನು ಸರಿದೂಗಿಸಲು ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು 22,000 ಕೋ.ರೂ.ತೆರಿಗೆದಾರರ ಹಣವನ್ನು ಪಡೆದಿದ್ದರೂ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಇಳಿಸುವ ಗೋಜಿಗೆ ಹೋಗಿರಲಿಲ್ಲ.
ವಿತ್ತವರ್ಷ 2021ರಲ್ಲಿ 415 ಡಾಲರ್ ಗಳಿದ್ದ ಸೌದಿ ಪ್ರೊಪೇನ್ ಬೆಲೆ (ಎಲ್ಪಿಜಿಗೆ ಅಂತರರಾಷ್ಟ್ರೀಯ ಮಾನದಂಡ ಬೆಲೆ) ವಿತ್ತವರ್ಷ 2023ರಲ್ಲಿ 712 ಡಾಲರ್ ಗೇರಿದ್ದರಿಂದ ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳನ್ನು ಹೆಚ್ಚಿಸುವುದು ತೈಲ ಮಾರಾಟ ಕಂಪನಿಗಳಿಗೆ ಅನಿವಾರ್ಯವಾಗಿತ್ತು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಕಳೆದ ತಿಂಗಳು ರಾಜ್ಯಸಭೆಯಲ್ಲಿ ಸಮರ್ಥಿಸಿಕೊಂಡಿದ್ದರು.
ಆದರೆ ಆಗಿನಿಂದ ಅಂತರರಾಷ್ಟ್ರೀಯ ಬೆಲೆಗಳಿಗೆ ಅನುಗುಣವಾಗಿ ಎಲ್ಪಿಜಿ ಬೆಲೆಗಳಲ್ಲಿ ಇಳಿಕೆಯಾಗಿಲ್ಲ.
ಉದಾಹರಣೆಗೆ ಈ ವರ್ಷದ ಜೂನ್ ನಲ್ಲಿ ಸೌದಿ ಅರಾಮ್ಕೋ ಪ್ರೊಪೇನ್ ಬೆಲೆಯನ್ನು ಪ್ರತಿ ಟನ್ಗೆ 450 ಡಾಲರ್ ಗಳಿಗೆ ಇಳಿಸಿತ್ತು. ಸೌದಿಯಲ್ಲಿ ಆಗಸ್ಟ್ ಡೆಲಿವರಿಗೆ ಪ್ರೊಪೇನ್ನ ಪ್ರಸಕ್ತ ಬೆಲೆ 475 ಡಾ.ಆಗಿದೆ. ಈ ನಡುವೆ ಈ ವರ್ಷದ ಮಾರ್ಚ್ನಿಂದ ಎಲ್ಪಿಜಿ ಬೆಲೆಗಳು ಗರಿಷ್ಠ ಮಟ್ಟದಲ್ಲಿಯೇ ಇವೆ.
ಸುಮಾರು ಏಳು ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳಲು ಬಿಜೆಪಿ ನೇತೃತ್ವದ ಸರಕಾರವು ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಪಿಜಿ ಸಬ್ಸಿಡಿ ಮರುಸ್ಥಾಪನೆಯ ನಿರ್ಧಾರ ಹೊರಬಿದ್ದಿದೆ.