ಗುಜರಾತ್ | ಮತ್ತೆ ಹೆಡೆ ಎತ್ತಿದ ರ್ಯಾಗಿಂಗ್ ಪಿಡುಗಿಗೆ ಎಂಬಿಬಿಎಸ್ ವಿದ್ಯಾರ್ಥಿ ಬಲಿ!
ಗಂಟೆಗಟ್ಟಲೆ ನಿಂತುಕೊಳ್ಳುವಂತೆ ಮಾಡಿದ್ದ ರ್ಯಾಗರ್ ಗಳು
ಸಾಂದರ್ಭಿಕ ಚಿತ್ರ
ಪಟನ್ (ಗುಜರಾತ್) : 18 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯನ್ನು ಆತನ ಹಿರಿಯ ವಿದ್ಯಾರ್ಥಿಗಳು ಮೂರು ಗಂಟೆಗಳ ಕಾಲ ನಿಂತುಕೊಳ್ಳುವಂತೆ ಮಾಡಿದ್ದರಿಂದ, ಬಳಲಿಕೆಯಿಂದ ಆತ ಮೃತಪಟ್ಟಿರುವ ಘಟನೆ ಗುಜರಾತ್ ರಾಜ್ಯದ ಪಟನ್ ಜಿಲ್ಲೆಯ ವೈದ್ಯಕೀಯ ಕಾಲೇಜೊಂದರಲ್ಲಿ ನಡೆದಿದೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ನಡೆದಿರುವ ಈ ಘಟನೆಯ ಕುರಿತು ಕಾಲೇಜು ತನಿಖೆಯನ್ನು ಪ್ರಾರಂಭಿಸಿದೆ.
ದೀರ್ಘಕಾಲ ನಿಂತುಕೊಳ್ಳುವಂತೆ ಮಾಡಿದ್ದರಿಂದ ಪ್ರಜ್ಞಾಹೀನನಾದ ವಿದ್ಯಾರ್ಥಿಯನ್ನು ಕಾಲೇಜಿನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಎಂದು ಹೇಳಲಾಗಿದೆ.
ಸಂತ್ರಸ್ತ ವಿದ್ಯಾರ್ಥಿಯನ್ನು ಅನಿಲ್ ಮೆಥಾನಿಯ ಎಂದು ಗುರುತಿಸಲಾಗಿದ್ದು, ಶನಿವಾರ ರಾತ್ರಿ ಪಟನ್ ಜಿಲ್ಲೆಯ ಧಾರ್ಪುರ್ ಬಳಿಯ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿ ನಿಲಯದಲ್ಲಿನ ಆತನ ಹಿರಿಯ ವಿದ್ಯಾರ್ಥಿಗಳು ಆತನಿಗೆ ಮೂರು ಗಂಟೆಗಳ ಕಾಲ ನಿಲ್ಲುವಂತೆ ಮಾಡಿದ್ದರಿಂದ ಪ್ರಜ್ಞಾಹೀನನಾಗಿದ್ದಾನೆ ಎಂದು ಕಾಲೇಜಿನ ಡೀನ್ ಡಾ. ಹಾರ್ದಿಕ್ ಶಾ ತಿಳಿಸಿದ್ದಾರೆ.
ಕುಸಿದು ಬಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಆತನನ್ನು ಪುನಶ್ಚೇೆತನಗೊಳಿಸುವ ಪ್ರಯತ್ನಗಳು ವಿಫಲಗೊಂಡಿದ್ದು, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
“ಮೆಥಾನಿಯನನ್ನು ಆತನ ಹಿರಿಯ ವಿದ್ಯಾರ್ಥಿಗಳು ಕಾಲೇಜು ವಿದ್ಯಾರ್ಥಿ ನಿಲಯದ ಬಳಿ ಮೂರು ಗಂಟೆಗಳ ಕಾಲ ನಿಲ್ಲುವಂತೆ ಮಾಡಿ, ತನ್ನನ್ನು ಪರಿಚಯಿಸಿಕೊಳ್ಳುವಂತೆ ಮಾಡಿದ ನಂತರ ಆತ ಮೃತಪಟ್ಟ” ಎಂದು ಆತನ ಸಹಪಾಠಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಬಲಿಸಾನ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.