ಮಧ್ಯಪ್ರದೇಶ: ಇವಿಎಂ, ಚುನಾವಣಾ ಸಿಬ್ಬಂದಿ ಇದ್ದ ಬಸ್ ನಲ್ಲಿ ಬೆಂಕಿ ಆಕಸ್ಮಿಕ
ಸಾಂದರ್ಭಿಕ ಚಿತ್ರ Photo: PTI
ಬೆಟೂಲ್, ಮಧ್ಯಪ್ರದೇಶ: ಚುನಾವಣಾ ಸಿಬ್ಬಂದಿ ಮತ್ತು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಒಯ್ಯುತ್ತಿದ್ದ ಬಸ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿ, ಕೆಲ ಇವಿಎಂಗಳಿಗೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಗೋಲಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಆದರೆ ಬಸ್ಸಿನ ಚಾಲಕ ಅಥವಾ ಯಾವುದೇ ಚುನಾವಣಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಬೆಟೂಲ್ ಜಿಲ್ಲಾಧಿಕಾರಿ ನರೇಂದ್ರ ಸೂರ್ಯವಂಶಿ ಪಿಟಿಐಗೆ ತಿಳಿಸಿದ್ದಾರೆ.
ಮತಗಟ್ಟೆ ಸಂಖ್ಯೆ 275, 276, 277, 278, 279 ಮತ್ತು 280ರ ಇವಿಎಂಗಳ ಪೈಕಿ ನಾಲ್ಕು ಹಾನಿಗೀಡಾಗಿವೆ. ಬಸ್ ಸಂಪೂರ್ಣ ಭಸ್ಮವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದರು ಎಂದು ಅವರು ವಿವರ ನೀಡಿದ್ದಾರೆ.
ಆರು ಮತಗಟ್ಟೆಗಳ ಚುನಾವಣಾ ಸಿಬ್ಬಂದಿ ಹಾಗೂ ಇವಿಎಂಗಳು ಬಸ್ಸಿನಲ್ಲಿದ್ದವು. ಎರಡು ಇವಿಎಂಗಳು ಸುರಕ್ಷಿತವಾಗಿವೆ. ಹಾನಿಗೀಡಾಗಿರುವ ಇವಿಎಂಗಳಲ್ಲಿ ಕಂಟ್ರೋಲ್ ಯುನಿಟ್ ಅಥವಾ ಬ್ಯಾಲೆಟ್ ಯುನಿಟ್ ಭಸ್ಮವಾಗಿವೆ ಎಂದಿದ್ದಾರೆ.
ಈ ಇವಿಎಂಗಳಲ್ಲಿ ದಾಖಲಾದ ಮತಗಳ ಸಂಖ್ಯೆ ಮೇಲೆ ಇದು ಪರಿಣಾಮ ಬೀರಬಹುದೇ ಎಂದು ಕೇಳಿದ ಪ್ರಶ್ನೆಗೆ, ಈ ಸಂಬಂಧ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಲಾಗುವುದು. ಹಾನಿಗೀಡಾದ ಮತಯಂತ್ರಗಳ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ ಎಂದು ಉತ್ತರಿಸಿದರು.