ಮಧ್ಯಪ್ರದೇಶ: ಸೇನಾ ಅಧಿಕಾರಿಗಳು, ಪ್ರಿಯತಮೆಯರ ಮೇಲೆ ದಾಳಿ, ಅತ್ಯಾಚಾರ
ಮಹೌ (ಮಧ್ಯಪ್ರದೇಶ): ಪಿಕ್ ನಿಕ್ ಗೆ ತೆರಳಿದ್ದ ಇಬ್ಬರು ಯುವ ಸೇನಾ ಅಧಿಕಾರಿಗಳು ಹಾಗೂ ಅವರ ಇಬ್ಬರು ಪ್ರಿಯತಮೆಯರ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಆ ಪೈಕಿ ಓರ್ವ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಇಂಧೋರ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮಹೌ ಕಂಟೋನ್ಮೆಂಟ್ ಪ್ರದೇಶದ ಇನ್ಫ್ಯಾಂಟ್ರಿ ಸ್ಕೂಲ್ ನಲ್ಲಿ ಯುವ ಅಧಿಕಾರಿಗಳಾಗಿ ತರಬೇತಿ ಪಡೆಯುತ್ತಿದ್ದ, 23 ಹಾಗೂ 24 ವಯಸ್ಸಿನ ಇಬ್ಬರು ಅಧಿಕಾರಿಗಳು ಪಿಕ್ ನಿಕ್ ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಬಡಗೊಂಡ ಪೊಲೀಸ್ ಠಾಣಾಧಿಕಾರಿ ಲೋಕೇಂದ್ರ ಸಿಂಗ್ ಹಿರೋರ್ ಹೇಳಿದ್ದಾರೆ.
ಬುಧವಾರ ನಸುಕಿನ 2 ಗಂಟೆಯ ವೇಳೆಗೆ ಏಳು ಮಂದಿ ಅಪರಿಚಿತರು ಮಹೌ- ಮಂಡಲೇಶ್ವರ ರಸ್ತೆಯ ಈ ಪಿಕ್ ನಿಕ್ ತಾಣಕ್ಕೆ ಬಂದು, ಕಾರಿನಲ್ಲಿ ಕುಳಿತಿದ್ದ ಅಧಿಕಾರಿ ಹಾಗೂ ಯುವತಿಯನ್ನು ಥಳಿಸಿದರು. ಪಕ್ಕದಲ್ಲಿ ಇನ್ನೊಂದು ಕಾರಿನಲ್ಲಿದ್ದ ಮತ್ತೊಬ್ಬ ಅಧಿಕಾರಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಪೊಲೀಸರನ್ನು ನೋಡಿದ ತಕ್ಷಣ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಎಲ್ಲ ನಾಲ್ಕು ಮಂದಿ ಸಂತ್ರಸ್ತರನ್ನು ಮಹೌ ಸಿವಿಲ್ ಆಸ್ಪತ್ರೆಗೆ ಮುಂಜಾನೆ 6.30ರ ವೇಳೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆತಂದಿದ್ದು, ಅಧಿಕಾರಿಗಳ ಮೈಮೇಲೆ ಗಾಯದ ಗುರುತುಗಳಿವೆ ಎಂದು ವೈದ್ಯರು ಹೇಳಿದ್ದಾರೆ. ಯುವತಿಯರ ಪೈಕಿ ಒಬ್ಬಾಕೆಯ ಮೇಲೆ ಕಿಡಿಗೇಡಿಗಳು ಅತ್ಯಾಚಾರ ಎಸಗಿದ್ದನ್ನು ವೈದ್ಯಕೀಯ ಪರೀಕ್ಷೆ ದೃಢಪಡಿಸಿದೆ.
ಕಿಡಿಗೇಡಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ಗಳಡಿ ಲೂಟಿ, ಡಕಾಯಿತಿ, ಅತ್ಯಾಚಾರ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಇಂಧೋರ್ ಗ್ರಾಮೀಣ ಎಸ್ಪಿ ಹಿತಿಕಾ ವಸಲ್ ಹೇಳಿದ್ದಾರೆ.