ಮಧ್ಯಪ್ರದೇಶ: ಕಾಂಗ್ರೆಸ್ ಸೇರಿದ ಬಿಜೆಪಿ ಮಾಜಿ ಸಂಸದ ಬೋಧಸಿಂಗ್ ಭಗತ್
ಬೋಧಸಿಂಗ್ ಭಗತ್ Photo: twitter.com/bsbhagatbjp
ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಆಡಳಿತ ಪಕ್ಷವಾದ ಬಿಜೆಪಿಯಿಂದ ವಿರೋಧ ಪಕ್ಷವಾದ ಕಾಂಗ್ರೆಸ್ ಮುಖಂಡರ ಪಕ್ಷಾಂತರ ಪರ್ವ ಆರಂಭವಾಗಿದೆ.
ಆದಿವಾಸಿ ಜನ ಅತ್ಯಧಿಕ ಸಂಖ್ಯೆಯಲ್ಲಿರುವ ಮಹಾಕೋಶಲ್ ಪ್ರದೇಶದಲ್ಲಿ ಬಾಲಘಾಟ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಮಾಜಿ ಸಂಸದ ಬೋಧಸಿಂಗ್ ಭಗತ್ ಬುಧವಾರ ಕಾಂಗ್ರೆಸ್ ಪಕ್ಷ ಸೇರಿರುವುದು ಆಡಳಿತ ಪಕ್ಷಕ್ಕೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
2014ರ ಚುನಾವಣೆಯಲ್ಲಿ ಬಾಲಘಾಟ್ ಕ್ಷೇತ್ರದಿಂದ ಗೆದ್ದಿದ್ದ ಹಾಗೂ ಈ ಜಿಲ್ಲೆಯ ಖೈರ್ಲಂಜಿ ವಿಧಾನಸಭಾ ಕ್ಷೇತ್ರದಿಂದ ಹಿಂದೆ ಗೆಲುವು ಸಾಧಿಸಿದ್ದ ಭಗತ್, ಶಿವರಾಜ್ ಸಿಂಗ್ ಚೌಹಾಣ್ ಅವರ ಜನವಿರೋಧಿ ನೀತಿಗಳಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದರು. ಜತೆಗೆ ಏಳು ಬಾರಿ ಬಿಜೆಪಿ ಟಿಕೆಟ್ ನಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಗೌರಿಶಂಕರ್ ಬಿಸೇನ್ ಅವರ ಪ್ರಾಬಲ್ಯದ ಹಿನ್ನೆಲೆಯಲ್ಲಿ ತಾವು ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬಂದಿರುವುದಾಗಿ ವಿವರಿಸಿದರು. ಬಿಸೇನ್ ಅವರು ಮಧ್ಯಪ್ರದೇಶದ ಹಾಲಿ ಸಚಿವರು.
ಬಾಲಘಾಟ್ ಜಿಲ್ಲೆಯಲ್ಲಿ ಬಿಸೇನ್ ಹಾಗೂ ಭಗತ್ ನಡುವೆ ಸುಧೀರ್ಘ ಕಾಲದಿಂದ ಪೈಪೋಟಿ ಇದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಗೆದ್ದಿದ್ದ ಭಗತ್, 2019ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ 47 ಸಾವಿರ ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದರು. ಬಿಜೆಪಿಯಿಂದ ಮಾಜಿ ಸಚಿವ ಧಲ್ ಸಿಂಗ್ ಬಿಸೇನ್ ಗೆದ್ದಿದ್ದರು. ಭಗತ್ ಅವರಿಗೆ 2019ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ಗೌರಿಶಂಕರ್ ಬಿಸೇನ್ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.