ಮಧ್ಯಪ್ರದೇಶ ಸಚಿವನ ಪುತ್ರನಿಂದ ದಾಂಧಲೆ: ಆರೋಪಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಪೊಲೀಸರ ಅಮಾನತು
ಅಭಿಜ್ಞಾನ್ ಪಟೇಲ್ Photo: instagram.com/abhigyan_yashu/
ಭೋಪಾಲ್: ಹೋಟೆಲ್ ಮಾಲೀಕರಾದ ದಂಪತಿ, ಅವರ ಸಿಬ್ಬಂದಿ ಮತ್ತು ಪತ್ರಕರ್ತರೊಬ್ಬರ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಲ್ಲದೇ, ದೂರು ನೀಡಲು ಹೋದಾಗ ಪೊಲೀಸ್ ಠಾಣೆಯಲ್ಲೂ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಧ್ಯಪ್ರದೇಶದ ಸಚಿವ ನರೇಂದ್ರ ಶಿವಾಜಿ ಪಾಟೀಲ್ ಅವರ ಪುತ್ರ ಅಭಿಜ್ಞಾನ್ ಪಟೇಲ್ (30) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆದರೆ ಬೆಂಬಲಿಗರ ದೊಡ್ಡ ಗುಂಪಿನೊಂದಿಗೆ ಮಧ್ಯರಾತ್ರಿ ಠಾಣೆಗೆ ಭೇಟಿ ನೀಡಿ ಅಭಿಜ್ಞಾನ್ ನೀಡಿದ ದೂರಿನ ಮೇರೆಗೆ ಆತನನ್ನುಥಳಿಸಿದ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಆರೋಪಿಗಳಿಗೆ ಬೆಲ್ಟ್ ನಲ್ಲಿ ಹೊಡೆದ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಭೋಪಾಲ್ ಪೊಲೀಸ್ ಆಯುಕ್ತ ಹರಿನಾರಾಯಣ ಚಾರಿ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.
ಪತಿ ಡೆನ್ನಿಸ್ ಮಾರ್ಟೀನ್ ಜತೆ ಹೊಟೇಲ್ ನಡೆಸುತ್ತಿರುವ ಅಲಿಶಾ ಸಕ್ಸೇನಾ, ಸಚಿವಪುತ್ರ ಅಭಿಜ್ಞಾನ್ ವಿರುದ್ಧ ದೂರು ನೀಡಿ, ರಾತ್ರಿ 8ರ ಸುಮಾರಿಗೆ ಒಂದು ಜೋಡಿ ರೆಸ್ಟೋರೆಂಟ್ ಹೊರಗೆ ನಿಂತಿತ್ತು. ಆಗ ಎಸ್ ಯುವಿಯಲ್ಲಿ ಆಗಮಿಸಿದ ಕೆಲ ಪುರುಷರು ಹಾಗೂ ಮಹಿಳೆಯರು ಬೈಕ್ ನಲ್ಲಿ ಇದ್ದ ಪತ್ರಕರ್ತ ವಿವೇಕ್ ಸಿಂಗ್ ಎಂಬವರ ಮೇಲೆ ಹಲ್ಲೆ ನಡೆಸಿದರು ಎಂದು ವಿವರಿಸಿದ್ದಾರೆ.
ಅಲಿಶಾ ಮಧ್ಯಪ್ರವೇಶಿಸಿದಾಗ ಇವರನ್ನು ನಿಂದಿಸಿ ರಸ್ತೆ ಮಧ್ಯದಲ್ಲೇ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಲಿಶಾ ಪತಿ ಡೆನ್ನಿಸ್, ರಕ್ಷಣೆಗೆ ಬಂದ ಹೋಟೆಲ್ ಸಿಬ್ಬಂದಿ ಸೀತಾರಾಂ ಮೇಲೂ ಹಲ್ಲೆ ನಡೆದಿದೆ. "ನಾನು ಅಭಿಜ್ಞಾನ್, ಸಚಿವರ ಪುತ್ರ, ತಾಕತ್ತಿದ್ದರೆ ನೀವು ಮಾಡುವುದನ್ನು ಮಾಡಿ" ಎಂದು ಸಂತ್ರಸ್ತರಿಗೆ ಸವಾಲು ಹಾಕಿದ್ದಾನೆ ಎಂದು ದೂರಲಾಗಿದೆ.
ಶಹಾಪುರ ಠಾಣೆಗೆ ದೂರು ನೀಡಲು ತೆರಳಿದ ನಾಲ್ವರು ಸಂತ್ರಸ್ತರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಕಳುಹಿಸಿದಾಗ, ಅಭಿಜ್ಞಾನ್ ಮತ್ತು ಅವರ ಬೆಂಬಲಿಗರು ಮತ್ತೆ ದಾಳಿ ಮಾಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮಧ್ಯಪ್ರವೇಶಿಸಿದರು ಎನ್ನಲಾಗಿದೆ.
ಅಭಿಜ್ಞಾನ್ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 324, 294, 506 ಮತ್ತು 34ರ ಅನ್ವಯ ದೂರು ದಾಖಲಿಸಲಾಗಿದೆ.