ಮಧ್ಯಪ್ರದೇಶದ ಮೂರು ಗ್ರಾಮದಲ್ಲಿ ಕಳ್ಳರು, ದರೋಡೆಕೋರರೇ ಹೆಚ್ಚು!
ರಾಷ್ಟೀಯ ಅಪರಾಧ ನಕ್ಷೆಯಲ್ಲಿ ಈ ಗ್ರಾಮಗಳು ಕ್ರೈಂ ಹಾಟ್ ಸ್ಪಾಟ್
AI Photo
ರಾಜ್ ಗಢ್: ಮಧ್ಯಪ್ರದೇಶದ ರಾಜ್ ಗಢ್ ಜಿಲ್ಲೆಯ ಆ ಮೂರು ಗ್ರಾಮಗಳಲ್ಲಿ ಸಮೃದ್ಧಿ ಇದೆ. ವೈಭವೋಪೇತ ಬಂಗಲೆಗಳು, ವಿಸ್ತಾರವಾದ ಆವರಣಗಳು ಅಲ್ಲಿ ಕಂಡು ಬರುತ್ತವೆ. ಹೀಗಿದ್ದೂ, ಆ ಮೂರು ಗ್ರಾಮಗಳು ಅಪರಾಧ ಕೃತ್ಯಗಳಿಗಾಗಿ ಕುಖ್ಯಾತವಾಗಿವೆ!
ಇತ್ತೀಚೆಗೆ ರಾಜಸ್ಥಾನದ ಜೈಪುರದ ಹೋಟೆಲ್ ನಲ್ಲಿ ಆಯೋಜನೆಗೊಂಡಿದ್ದ ವಿವಾಹೋತ್ಸವದಲ್ಲಿ ನಡೆದ 1.45 ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳ ದರೋಡೆಯು, ಮತ್ತೆ ಆ ಮೂರು ಗ್ರಾಮಗಳ ಮೇಲೆ ಪೊಲೀಸರ ಕಣ್ಣು ಬೀಳುವಂತೆ ಮಾಡಿದ್ದು, ಈ ಮೂರು ಗ್ರಾಮಗಳು ರಾಷ್ಟ್ರ ಮಟ್ಟದ ಅಪರಾಧ ನಕ್ಷೆಯಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿವೆ.
ರಾಷ್ಟ್ರ ಮಟ್ಟದ ಅಪರಾಧ ನಕ್ಷೆಯಲ್ಲಿ ಕುಖ್ಯಾತವಾಗಿರುವ ಆ ಗ್ರಾಮಗಳು ಕದಿಯ ಸಾನ್ಸಿ, ಗುಲ್ಖೇಡಿ ಹಾಗೂ ಹುಲ್ಖೇಡಿ ಗ್ರಾಮಗಳಾಗಿವೆ. ಸ್ಥಳೀಯ ಪೊಲೀಸರ ಅಂದಾಜಿನ ಪ್ರಕಾರ, ಈ ಗ್ರಾಮಗಳ ಬಾಲಕರು, ಪುರುಷರು, ಬಾಲಕಿಯರು ಹಾಗೂ ಮಹಿಳೆಯರ ವಿರುದ್ಧ ದೇಶಾದ್ಯಂತ ಸುಮಾರು 1000-1200 ಅಪರಾಧ ಪ್ರಕರಣಗಳು ದಾಖಲಾಗಿವೆ. ಸುಮಾರು 5,000 ಜನಸಂಖ್ಯೆಯನ್ನು ಹೊಂದಿರುವ ಕದಿಯಾ ಸಾನ್ಸಿ ಅಕ್ರಮ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ.
ಆದರೆ, ಈ ಗ್ರಾಮಗಳಿಂದ ಆರೋಪಿಗಳನ್ನು ಬಂಧಿಸುವುದು ಪೊಲೀಸರ ಪಾಲಿಗೆ ಸುಲಭ ಸಾಧ್ಯವಲ್ಲ. ಆಗಸ್ಟ್ 10ರಂದು ಸ್ಥಳೀಯ ಪೊಲೀಸರ ಭದ್ರತೆಯೊಂದಿಗೆ ತಮಿಳುನಾಡಿನ ಕೊಯಂಬತ್ತೂರಿನ ಪೊಲೀಸ್ ತಂಡವೊಂದು ಆರೋಪಿಗಳನ್ನು ಬಂಧಿಸಲು ತೆರಳಿದ್ದಾಗ, ಬೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಗುಲ್ಖೇಡಿ ಗ್ರಾಮದಲ್ಲಿ ಅವರ ಮೇಲೆ ಸ್ಥಳೀಯರು ದಾಳಿ ನಡೆಸಿದ್ದರು.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಬೋಡಾ ಪೊಲೀಸ್ ಠಾಣಾಧಿಕಾರಿ ರಾಮ್ ಕುಮಾರ್ ಭಗತ್, “ಈ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ಮೇಲೆ ಸ್ಥಳೀಯವಾಗಿ ಬೆರಳೆಣಿಕೆಯಷ್ಟು ಪ್ರಕರಣಗಳಿದ್ದರೂ, ವಿಶೇಷವಾಗಿ ಕಡಿಯ ಸಾನ್ಸಿ ಗ್ರಾಮದ ನಿವಾಸಿಗಳ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಹೊರಗಿನ ಪೊಲೀಸರು ನಮ್ಮನ್ನು ಸಂಪರ್ಕಿಸಿದಾಗ ಮಾತ್ರ, ನಮಗೆ ಈ ಸಂಗತಿ ತಿಳಿಯುತ್ತದೆ. ಈ ಜನರ ವಿರುದ್ಧ ಭಾರತದಾದ್ಯಂತ ಸುಮಾರು 1000-1200 ಪ್ರಕರಣಗಳು ದಾಖಲಾಗಿರಬಹುದು” ಎಂದು ಹೇಳುತ್ತಾರೆ.
ಹಣವನ್ನು ಸುಲಭವಾಗಿ ಗಳಿಸಬಹುದು ಎಂಬ ಆಮಿಷ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರವಿರುವ ಈ ಮೂರು ಗ್ರಾಮಗಳ ನಿವಾಸಿಗಳನ್ನು ಅಪರಾಧ ಕೃತ್ಯಗಳತ್ತ ಸೆಳೆಯುತ್ತಿದೆ ಎಂದು ಅವರು ಹೇಳುತ್ತಾರೆ.
“ಅವರು ಕಳ್ಳತನ, ಲೂಟಿ ಹಾಗೂ ಇನ್ನಿತರ ಅಪರಾಧ ಕೃತ್ಯಗಳ ಮೂಲಕ ಸುಲಭವಾಗಿ ಹಣ ಸಂಪಾದಿಸುತ್ತಾರೆ. ಅವರು ಪರಸ್ಪರರನ್ನು ಪ್ರೇರೇಪಿಸುವಂತೆ ಕಂಡು ಬರುತ್ತಿದೆ. ಈ ಗ್ರಾಮಗಳ ಬಹುತೇಕರು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿರುವುದರಿಂದ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ನಿಪುಣರಾಗಿದ್ದಾರೆ” ಎಂದು ಅವರು ಹೇಳುತ್ತಾರೆ.
ಕೊಯಂಬತ್ತೂರಿನಲ್ಲಿ ನಡೆದಿದ್ದ ಅಪರಾಧ ಕೃತ್ಯದ ಆರೋಪಿಯನ್ನು ಪತ್ತೆ ಹಚ್ಚಲು ಕೊಯಂಬತ್ತೂರು ಪೊಲೀಸ್ ತಂಡದೊಂದಿಗೆ ಈ ಗ್ರಾಮಗಳಿಗೆ ಭೇಟಿ ನೀಡಿದ್ದಾಗ, ಸ್ಥಳೀಯ ನಿವಾಸಿಗಳು ಸ್ಥಳೀಯ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದರು ಎಂದು ಭಗತ್ ಹೇಳುತ್ತಾರೆ. ಪೊಲೀಸ್ ತಂಡದ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಕದಿಯಲು, ಕಳ್ಳತನ ಮಾಡಲು ಹಾಗೂ ಇನ್ನಿತರ ಅಪರಾಧ ಕೃತ್ಯಗಳಲ್ಲಿ ತೊಡಗಲು ಹೊರಗಿನವರಿಗೂ ಕದಿಯ ಸಾನ್ಸಿ ಗ್ರಾಮದಲ್ಲಿ ತರಬೇತಿ ನೀಡಲಾಗುತ್ತದೆ ಎಂಬ ವರದಿಗಳ ಕುರಿತು ಭಗತ್ ಅವರನ್ನು ಪ್ರಶ್ನಿಸಿದಾಗ, ನಮಗೆ ಇದರ ಅರಿವಿಲ್ಲ ಎಂದು ಅವರು ಉತ್ತರಿಸಿದ್ದಾರೆ. ಈ ಗ್ರಾಮಗಳ ಜನರು ಅಪರಾಧ ಕೃತ್ಯಗಳನ್ನು ನಡೆಸುವುದಕ್ಕೂ ಮುನ್ನ ಬಲಿ ಕಾರ್ಯ ಕೈಗೊಳ್ಳುತ್ತಾರೆ ಎಂದೂ ಅವರು ಹೇಳಿದ್ದಾರೆ.
ಈ ಗ್ರಾಮಗಳಲ್ಲಿ ಪೊಲೀಸ್ ತಂಡವೊಂದರ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಈ ಗ್ರಾಮಗಳು ಅಕ್ರಮ ಮದ್ಯ ವ್ಯಾಪಾರಕ್ಕೂ ಕುಖ್ಯಾತವಾಗಿವೆ. ಆದರೆ, ಈ ಆರೋಪಗಳನ್ನು ಅಲ್ಲಗಳೆಯುವ ಕದಿಯ ಸಾನ್ಸಿ ಗ್ರಾಮದ ಮುಖ್ಯಸ್ಥ ಮೋಹನ್ ಸಿಂಗ್, ಇಲ್ಲಿನ ಜನರು ಸುಶಿಕ್ಷಿತರಾಗಿದ್ದು, ಪ್ರಮುಖ ನಗರಗಳಲ್ಲಿ ವಿವಿಧ ಉದ್ಯೋಗಗಳಲ್ಲಿ ದುಡಿಯುತ್ತಿದ್ದಾರೆ ಎಂದು ಹೇಳುತ್ತಾರೆ.
“ಇಂತಹ ಕೃತ್ಯಗಳಲ್ಲಿ ಕೆಲವು ಜನರು ಭಾಗಿಯಾಗಿರುವ ಸಾಧ್ಯತೆ ಇದೆ. ಆದರೆ, ಇಲ್ಲಿನ ಜನರು ಸುಶಿಕ್ಷಿತರಾಗಿದ್ದು, ಪ್ರತಿ ಮನೆಯ ಇಬ್ಬರಿಂದ ಮೂವರು ದೊಡ್ಡ ನಗರಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನಮ್ಮ ಮಕ್ಕಳು ಉತ್ತಮ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ” ಎಂದೂ ಅವರು ಸಮರ್ಥಿಸಿಕೊಳ್ಳುತ್ತಾರೆ.
ಈ ಪ್ರದೇಶವು ಅಪರಾಧ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ ಎಂಬ ವರದಿಗಳನ್ನು ಅವರು ಅಲ್ಲಗಳೆಯುತ್ತಾರೆ. ಈ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಹೇಳುತ್ತಾರೆ.
ಅಪರಾಧ ಕೃತ್ಯಗಳಲ್ಲಿ ಪರಿಣತರಾಗಲು ಮಕ್ಕಳಿಗೆ ಈ ಗ್ರಾಮಗಳ ಜನರು ತರಬೇತಿಯನ್ನು ನೀಡುತ್ತಾರೆ ಎಂಬ ವರದಿಗಳನ್ನೂ ಸಿಂಗ್ ನಿರಾಕರಿಸುತ್ತಾರೆ.
ಜೈಪುರದಲ್ಲಿ ನಡೆದ ರೂ. 1.45 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳ ಕಳವು ಪ್ರಕರಣದ ಕುರಿತು ಪ್ರಶ್ನಿಸಿದಾಗ, ಆ ಬಾಲಕನು ತಾನೂ ಕಸಿದ ಚೀಲದ ಮೌಲ್ಯವನ್ನು ಅಂದಾಜಿಸಿರಲಾರ. ತನ್ನ ಜೇಬಿನ ಖರ್ಚಿಗೆ ರೂ. 10,000-20,000 ಸಿಗಬಹುದು ಎಂದು ಆತ ಅಂದಾಜಿಸಿರುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.
“ಗ್ರಾಮದಲ್ಲಿನ ಎಲ್ಲರಿಗೂ ಜಮೀನು ಮತ್ತು ಆಸ್ತಿ ಇದೆ. ನಾವು ಭಯೋತ್ಪಾದಕರಲ್ಲ. ಎಲ್ಲರಿಗೂ ತಮ್ಮ ಮಕ್ಕಳು ವಿದ್ಯಾವಂತರಾಗುವುದು ಬೇಕಿದೆ. ಇದು ತಂತ್ರಜ್ಞಾನದ ಯುಗವಾಗಿದೆ. ಅಂತಹ ಅಪರಾಧ ಕೃತ್ಯಗಳಲ್ಲಿ ಈ ಹಿಂದೆ ಭಾಗಿಯಾಗಿದ್ದವರ ಕಾಲ ಮುಗಿದಿದೆ. ಯಾರಿಂದಲೂ ಜಿಲ್ಲಾಡಳಿತ ಹಾಗೂ ಪೊಲೀಸರನ್ನು ಮಣಿಸಲು ಸಾಧ್ಯವಿಲ್ಲ” ಎನ್ನುತ್ತಾರವರು.
ಆದರೆ, ಪೊಲೀಸ್ ದಾಖಲೆಗಳು ಈ ಮಾತಿಗೆ ವ್ಯತಿರಿಕ್ತವಾದ ಸತ್ಯವನ್ನು ಮುಂದಿಡುತ್ತವೆ.
ಕಳೆದ ಆರು ತಿಂಗಳಲ್ಲಿ ಕದಿಯ ಗ್ಯಾಂಗಿನ 25 ಸದಸ್ಯರನ್ನು ಬಂಧಿಸಿರುವ ಪೊಲೀಸರು, ಅವರಿಂದ ರೂ. 4.37 ಕೋಟಿ ಮೌಲ್ಯದ ಸರಕು ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕದಿಯ ಸಾನ್ಸಿ ಗ್ರಾಮದ ಜನರು ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ, ಇನ್ನಿತರ ರಾಜ್ಯಗಳಲ್ಲೂ ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿದ್ದಾರೆ ಎನ್ನುತ್ತಾರೆ ರಾಜ್ ಗಢ್ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಮಿಶ್ರ.
ಜೈಪುರ ಕಳ್ಳತನ ಘಟನೆಯನ್ನು ಉಲ್ಲೇಖಿಸುವ ಮಿಶ್ರ, ಆಗಸ್ಟ್ 8ರಂದು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿನ ಪಂಚತಾರಾ ಹೋಟೆಲ್ ನಲ್ಲಿ ಆಯೋಜನೆಗೊಂಡಿದ್ದ ವಿವಾಹೋತ್ಸವದ ಸಂದರ್ಭದಲ್ಲಿ 14 ವರ್ಷದ ಬಾಲಕನೊಬ್ಬ ರೂ. 1.45 ಕೋಟಿ ಮೊತ್ತದ ಚಿನ್ನಾಭರಣಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗಿದ್ದ ಎಂದು ಮಾಹಿತಿ ನೀಡಿದರು.
ವಧುವಿನ ತಾಯಿಗೆ ಕಳ್ಳತನದ ಅರಿವಾಗುವುದಕ್ಕೂ ಮುನ್ನ, ಆ ಬಾಲಕ ಮತ್ತು ಆತನ ಸಹಚರ ಸ್ಥಳದಿಂದ ಪರಾರಿಯಾಗಿದ್ದರು ಎಂದು ಅವರು ಹೇಳುತ್ತಾರೆ.
ರಾಜಸ್ಥಾನ ಪೊಲೀಸರಿಂದ ಈ ಮಾಹಿತಿ ಪಡೆದ ನಂತರ, 24 ಗಂಟೆಗಳೊಳಗೆ ರಾಜ್ ಗಢ್ ಪೊಲೀಸರು ಆರೋಪಿಯನ್ನು ಸೆರೆ ಹಿಡಿದರು ಎಂದು ಅವರು ತಿಳಿಸಿದರು.