ಮಧ್ಯಪ್ರದೇಶ: ದಲಿತ ವ್ಯಕ್ತಿಯ ತಲೆ, ಮುಖಕ್ಕೆ ಮಾನವ ಮಲ ಎಸೆದ ಆರೋಪಿಯ ಬಂಧನ
ಭೋಪಾಲ್: ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಬೇರೊಂದು ಜಾತಿಯ ವ್ಯಕ್ತಿಯೊಬ್ಬನನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದಕ್ಕೆ ತನ್ನ ಮುಖ ಹಾಗೂ ತಲೆಗೆ ಮಾನವ ಮಲವನ್ನು ಎಸೆಯಲಾಗಿದೆ ಎಂದು ದಲಿತ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಇತ್ತೀಚೆಗೆ, ಮಧ್ಯಪ್ರವೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ವ್ಯಕ್ತಿಯೊಬ್ಬಮೂತ್ರ ವಿಸರ್ಜನೆ ಮಾಡಿದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಭಾರೀ ಆಕ್ರೋಶಕ್ಕೆ ಕಾರಣವಾಯಿತು.
ಛತ್ತರ್ ಪುರ ಘಟನೆಗೆ ಸಂಬಂಧಿಸಿದಂತೆ ಒಬಿಸಿ ಸಮುದಾಯಕ್ಕೆ ಸೇರಿದ ಆರೋಪಿ ರಾಮಕೃಪಾಲ್ ಪಟೇಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ಸಂಜೆ ಪಿಟಿಐಗೆ ತಿಳಿಸಿದರು.
ಸಂತ್ರಸ್ತ ಶರತ್ ಅಹಿರ್ವಾರ್ ಶನಿವಾರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ ಎಂದು ಅವರು ಹೇಳಿದರು.
ಶುಕ್ರವಾರ ಛತ್ತರ್ ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬಿಕೌರಾ ಗ್ರಾಮದಲ್ಲಿ ಪಂಚಾಯತ್ಗೆ ಚರಂಡಿ ನಿರ್ಮಾಣದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಹಿರ್ವಾರ್ ಹೇಳಿದ್ದಾರೆ.
ಆರೋಪಿ ರಾಮಕೃಪಾಲ್ ಪಟೇಲ್ ಸಮೀಪದ ಹ್ಯಾಂಡ್ ಪಂಪ್ನಲ್ಲಿ ಸ್ನಾನ ಮಾಡುತ್ತಿದ್ದ. ನಿರ್ಮಾಣ ಕಾರ್ಯದಲ್ಲಿ ಬಳಸುತ್ತಿದ್ದ ಗ್ರೀಸ್ ಅನ್ನು ಆಕಸ್ಮಿಕವಾಗಿ ಪಟೇಲ್ ಮೈಗೆ ಸ್ಪರ್ಶಿಸಿದ್ದೆ. ಆಗ ಪಟೇಲ್ ಸ್ನಾನಕ್ಕೆ ಬಳಸುತ್ತಿದ್ದ ಮಗ್ ನಲ್ಲಿ ಹತ್ತಿರದಲ್ಲಿದ್ದ ಮಾನವ ಮಲವನ್ನು ತಂದು ನನ್ನ ತಲೆ ಹಾಗೂ ಮುಖ ಸೇರಿದಂತೆ ಮೈಮೇಲೆ ಲೇಪಿಸಿದ್ದಾನೆ ಎಂದು ಅಹಿರ್ವಾರ್ ಮಹಾರಾಜಪುರ ಪೊಲೀಸ್ ಠಾಣೆ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
''ಪಟೇಲ್ ನನ್ನ ಜಾತಿ ನಿಂದನೆ ಮಾಡಿದ್ದಾನೆ. ನಾನು ಈ ವಿಷಯವನ್ನು ಪಂಚಾಯತ್ ಗೆ ವರದಿ ಮಾಡಿದ್ದೇನೆ ಹಾಗೂ ಸಭೆ ಕರೆಯಲು ಆಗ್ರಹಿಸಿದ್ದೇನೆ. ಆದರೆ ಪಂಚಾಯತ್ ಶುಕ್ರವಾರ ನನಗೆ 600 ರೂಪಾಯಿ ದಂಡವನ್ನು ವಿಧಿಸಿದೆ” ಎಂದು ಅಹಿರ್ವಾರ್ ಆರೋಪಿಸಿದ್ದಾರೆ.