ಮಧ್ಯಪ್ರದೇಶ:ಯುವಕನನ್ನು ನರಬಲಿ ನೀಡಿದ ಆರೋಪ, ಇಬ್ಬರ ಬಂಧನ
ನರಸಿಂಗಪುರ: ಹೆಚ್ಚು ಹಣ ಗಳಿಕೆಗೆ ನೆರವಾಗುವ ನೆಪದಲ್ಲಿ ನರಸಿಂಗಪುರದಲ್ಲಿ 22ರ ಹರೆಯದ ಯುವಕನೋರ್ವನನ್ನು ನರಬಲಿ ನೀಡಿದ ಆರೋಪದಲ್ಲಿ ಇಬ್ಬರು ವಾಮಾಚಾರಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಅಂಕಿತ ಕೌರವ್‌ನ ಛಿದ್ರವಿಚ್ಛಿದ್ರ ಶವ ನ.4ರಂದು ಪತ್ತೆಯಾಗಿತ್ತು.
ಆರೋಪಿಗಳಾದ ಸುರೇಂದ್ರ ಕಚ್ಚಿ (40) ಮತ್ತು ರಮ್ಮು ಕಚ್ಚಿ (45) ಅವರನ್ನು ಭೇಟಿಯಾಗಿದ್ದ ಕೌರವ್ ಹೆಚ್ಚು ಹಣ ಗಳಿಸುವ ತನ್ನ ಬಯಕೆಯನ್ನು ಅವರ ಬಳಿ ಹೇಳಿಕೊಂಡಿದ್ದ. ಅವರು ಆತನನ್ನು ಬಲಿ ನೀಡುವ ಯೋಜನೆಯನ್ನು ರೂಪಿಸಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ನಾಲ್ಕು ತಿಂಗಳುಗಳ ಹಿಂದೆ ಕೌರವ್ ಅನಾರೋಗ್ಯಕ್ಕೆ ಗುರಿಯಾಗಿದ್ದಾಗ ವೈದ್ಯರನ್ನು ಸಂಪರ್ಕಿಸಿದ್ದನಾದರೂ ಚಿಕಿತ್ಸೆಯು ಫಲ ನೀಡಿರಲಿಲ್ಲ. ವಾಮಾಚಾರಿಗಳ ನೆರವಿನಿಂದ ಆತ ಗುಣಮುಖನಾಗಿದ್ದ. ಇದು ಆತ ಅವರನ್ನು ನಂಬುವಂತೆ ಮಾಡಿತ್ತು. ಸುಮಾರು 15 ದಿನಗಳ ಹಿಂದೆ ಕೌರವ್ ಕುಟುಂಬವು ಹಣಕಾಸು ಮುಗ್ಗಟ್ಟು ಎದುರಿಸಿತ್ತು. ಆತ ಇನ್ನೊಮ್ಮೆ ಆರೋಪಿಗಳನ್ನು ಭೇಟಿಯಾಗಿದ್ದ. ಆತನಿಗೆ ನೆರವಾಗಲು ಒಪ್ಪಿದ್ದ ಆರೋಪಿಗಳು ಇದಕ್ಕಾಗಿ ಆತನ ಬಲಹಸ್ತದ ಮಧ್ಯದ ಬೆರಳನ್ನು ತುಂಡರಿಸಬೇಕಾಗುತ್ತದೆ ಎಂದು ಮನದಟ್ಟು ಮಾಡಿದ್ದರು. ಬಳಿಕ ಟೇಕಪುರ ಗ್ರಾಮಕ್ಕೆ ಕೌರವ್‌ನನ್ನು ಕರೆದೊಯ್ದಿದ್ದ ಆರೋಪಿಗಳು ಆತನಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಬಳಿಕ ಹರಿತವಾದ ಆಯುಧದಿಂದ ಆತನ ರುಂಡವನ್ನು ಶರೀರದಿಂದ ಬೇರ್ಪಡಿಸಿದ್ದರು ಎಂದು ಪೋಲಿಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.