ತಮಿಳುನಾಡಿನ ಸಚಿವ ಬಾಲಾಜಿ ಬಿಡುಗಡೆಗೆ ಸಂಬಂಧಿಸಿ ಭಿನ್ನ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್
ಸೆಂಥಿಲ್ ಬಾಲಾಜಿ, Photo: Facebook
ಚೆನ್ನೈ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನದ ಸುಮಾರು ಮೂರು ವಾರಗಳ ನಂತರ, ಸಚಿವರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತಂತೆ ಮದ್ರಾಸ್ ಹೈಕೋರ್ಟ್ ಭಿನ್ನ ತೀರ್ಪು ನೀಡಿದೆ.
ಇದೀಗ ಮೂರನೇ ನ್ಯಾಯಾಧೀಶರಿಂದ ಪ್ರಕರಣದ ವಿಚಾರಣೆ ನಡೆಯಲಿದೆ.
ತನ್ನ ಅರ್ಜಿಯಲ್ಲಿ ಬಾಲಾಜಿ ಅವರ ಪತ್ನಿ, ಜಾರಿ ನಿರ್ದೇಶನಾಲಯಕ್ಕೆ (ಈಡಿ) ಬಂಧಿಸಲು ಯಾವುದೇ ಅಧಿಕಾರವಿಲ್ಲ ಹಾಗೂ ತನಿಖಾ ಸಂಸ್ಥೆಯು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಬಂಧನ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ವಾದಿಸಿದ್ದಾರೆ.
ತಮಿಳುನಾಡು ರಾಜ್ಯಪಾಲರು ಏಕಪಕ್ಷೀಯವಾಗಿ ಬಾಲಾಜಿ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಿದ ಕೆಲವೇ ದಿನಗಳ ನಂತರ ವಿಭಿನ್ನ ತೀರ್ಪು ಬಂದಿದೆ. ರಾಜ್ಯಪಾಲರು ತಮ್ಮ ಆದೇಶವನ್ನು ಗಂಟೆಗಳ ನಂತರ ಹಿಂಪಡೆದುಕೊಂಡರು. ಈ ಕ್ರಮಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಟುವಾಗಿ ಪ್ರತಿಕ್ರಿಯಿಸಿದ್ದರು.
ಹೈಕೋರ್ಟ್ ಪೀಠದ ಇಬ್ಬರು ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಜೆ. ನಿಶಾ ಬಾನು ಅವರು ಇಂದು ಅರ್ಜಿಯನ್ನು ಸಮರ್ಥನೀಯವಾಗಿದೆ . ಬಾಲಾಜಿ ಅವರನ್ನು ಬಿಡುಗಡೆ ಮಾಡಬೇಕು ಎಂದು ತೀರ್ಪು ನೀಡಿದರೆ, ಮತ್ತೋರ್ವ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ. ಭರತ ಚಕ್ರವರ್ತಿ ಅವರು ಅಸಹಮತ ವ್ಯಕ್ತಪಡಿಸಿ ಸಚಿವರ ಆಸ್ಪತ್ರೆಯ ವಾಸ್ತವ್ಯವನ್ನು ಬಂಧನದ ಅವಧಿಯಿಂದ ಹೊರಗಿಡಬೇಕು ಎಂದರು.
"ನಮ್ಮ ವಾದವು ಒಬ್ಬ ನ್ಯಾಯಾಧೀಶರ ಪರವಾಗಿ ಕಂಡುಬಂದಿದೆ. ಈಗ ಯಥಾಸ್ಥಿತಿ ಮುಂದುವರೆದಿದೆ. ಮೂರನೇ ನ್ಯಾಯಾಧೀಶರ ತೀರ್ಪಿಗಾಗಿ ಕಾಯೋಣ" ಎಂದು ಬಾಲಾಜಿ ಪರ ವಕೀಲರಾದ ಎನ್.ಆರ್. ಇಲಾಂಗೋ, NDTVಗೆ ತಿಳಿಸಿದರು.
ಆಡಳಿತಾರೂಢ ಡಿಎಂಕೆ ಕೂಡ ಆದೇಶ ಹಿನ್ನಡೆಯಲ್ಲ ಎಂದು ಹೇಳಿದೆ.
ಹಿಂದಿನ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 18 ಗಂಟೆಗಳ ಕಾಲ ಶೋಧ ನಡೆಸಿದ ನಂತರ ವಿದ್ಯುತ್ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜೂನ್ 14 ರಂದು ಈಡಿ ಬಂಧಿಸಿತ್ತು.