‘ಮಹಾರಾಜ ನಿವೃತ್ತಿ’: ಹೊಸ ಲೋಗೊ ಬಿಡುಗಡೆ ಮಾಡಿದ ಏರ್ ಇಂಡಿಯಾ
ಏರ್ ಇಂಡಿಯಾ | PHOTO: PTI
ಹೊಸದಿಲ್ಲಿ: ಏರ್ ಇಂಡಿಯಾದ ಪ್ರಖ್ಯಾತ ಲೋಗೋ ಆದ ಮಹಾರಾಜನಿಗೆ ವಿದಾಯ ಹೇಳಿದ ಟಾಟಾ ಮಾಲಕತ್ವದ ಏರ್ ಇಂಡಿಯಾ, ಗುರುವಾರ ತನ್ನ ನೂತನ ಲೋಗೋ ಬಿಡುಗಡೆ ಮಾಡಿದ್ದು, ಅದು ಅಪರಿಮಿತ ಸಾಧ್ಯತೆಗಳನ್ನು ಸೂಚಿಸುವಂತಿದೆ. ಈ ನೂತನ ಲೋಗೋ ಬಿಡುಗಡೆ ಮಾಡಲು 15 ತಿಂಗಳಿನಿಂದ ಏರ್ ಇಂಡಿಯಾ ಕೆಲಸ ಮಾಡಿದೆ. ಈ ಲೋಗೋವು ಅಶೋಕ ಚಕ್ರದಿಂದ ಪ್ರೇರಣೆಗೊಂಡಿದ್ದ ಹಳೆಯ ಕೆಂಪು ಹಂಸ ಹಾಗೂ ಕೇಸರಿ ಮುಳ್ಳುಗಳ ಲೋಗೋದ ಸ್ಥಾನವನ್ನು ಆಕ್ರಮಿಸಲಿದೆ.
ಏರ್ ಇಂಡಿಯಾದ ನೂತನ ಲೋಗೋ ಚಿಹ್ನೆಯು ‘ದಿ ವಿಸ್ತಾ’ ಎಂದಿದ್ದು, ಆಧುನಿಕ ವಿನ್ಯಾಸ ಒಳಗೊಂಡಿರುವ ಸುವರ್ಣ, ಕೆಂಪು ಹಾಗೂ ನೇರಳೆ ಬಣ್ಣಗಳನ್ನು ಹೊಂದಿದೆ.
ನೂತನ ಲೋಗೋ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ ಕಂಪನಿಯು, “ಈ ವಿನ್ಯಾಸವು ಉತ್ಕೃಷ್ಟ ಸುವರ್ಣ ಕಿಟಕಿ ಚೌಕಟ್ಟಿನಿಂದ ಪ್ರೇರಿತಗೊಂಡಿದ್ದು, ಅಪರಿಮಿತ ಸಾಧ್ಯತೆಗಳು, ಪ್ರಗತಿಪರತೆ ಹಾಗೂ ಭವಿಷ್ಯದೆಡೆಗಿನ ಏರ್ ಲೈನ್ಸ್ ನ ಧೈರ್ಯ, ವಿಶ್ವಾಸದ ದೃಷ್ಟಿಕೋನವನ್ನು ಸೂಚಿಸುತ್ತದೆ” ಎಂದು ಹೇಳಿದೆ.
ನೂತನ ಲೋಗೋವು ಕಲಾತ್ಮಕ ಹಾಗೂ ವಿಶಿಷ್ಟ ಭಾರತೀಯ ಕಿಟಕಿಯ ವಿನ್ಯಾಸದಿಂದ ಪ್ರೇರಣೆಗೊಂಡಿದ್ದು, ಈ ವಿನ್ಯಾಸವನ್ನು ಏರ್ ಇಂಡಿಯಾ ಚಾರಿತ್ರಿಕವಾಗಿ ಬಳಸುತ್ತಾ ಬರುತ್ತಿದೆ. ಈ ವಿನ್ಯಾಸವನ್ನು ಏರ್ ಇಂಡಿಯಾ ಕಂಪನಿಯು “ಅವಕಾಶಗಳ ಕಿಟಕಿ” ಎಂದು ಭಾವಿಸಿದೆ.