ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: 23 ಅಭ್ಯರ್ಥಿಗಳ ಎರಡನೆ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಸಾಂದರ್ಭಿಕ ಚಿತ್ರ
ಮುಂಬೈ: ಮುಂಬೈ ವಿಧಾನಸಭಾ ಚುನಾವಣೆಗೆ ಶನಿವಾರ ಕಾಂಗ್ರೆಸ್ ಪಕ್ಷವು 23 ಅಭ್ಯರ್ಥಿಗಳ ಎರಡನೆ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಾರ್ಧಾ, ಅಕೋಟ್, ನಾಗಪುರ ದಕ್ಷಿಣ ವಿಧಾಸಭಾ ಕ್ಷೇತ್ರಗಳು ಸೇರಿವೆ.
ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಸುನೀಲ್ ಕೇದಾರ್ ಅವರ ಪತ್ನಿ ಅನುಜಾ ಕೇದಾರ್ ಸೌನೇರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
21 ವರ್ಷಗಳ ಹಿಂದೆ ಬೆಳಕಿಗೆ ಬಂದಿದ್ದ ರೂ. 150 ಕೋಟಿ ಮೊತ್ತದ ಸಹಕಾರ ಬ್ಯಾಂಕ್ ಹಗರಣದ ಸಂಬಂಧ ನಾಗಪುರ ನ್ಯಾಯಾಲಯವು ಸುನೀಲ್ ಕೇದಾರ್ ಅಪರಾಧಿ ಎಂದು ತೀರ್ಪು ನೀಡಿ, ಐದು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಿಗೇ ಡಿಸೆಂಬರ್ 2023ರಲ್ಲಿ ಅವರು ಶಾಸಕತ್ವದಿಂದ ಅನರ್ಹಗೊಂಡಿದ್ದರು. ಹೀಗಾಗಿ ಐದು ಬಾರಿಯ ಶಾಸಕರಾದ ಸುನೀಲ್ ಕೇದಾರ್ ಬದಲಿಗೆ ಅವರ ಪತ್ನಿ ಕಣಕ್ಕಿಳಿಯಲಿದ್ದಾರೆ.
ವಿದರ್ಭ ಪ್ರಾಂತ್ಯದ ಹಿರಿಯ ಕಾಂಗ್ರೆಸ್ ನಾಯಕರಾಗಿರುವ ಸುನೀಲ್ ಕೇದಾರ್, ಗಾಂಧಿ ಕುಟುಂಬಕ್ಕೆ ಆಪ್ತರು ಎಂದು ಹೇಳಲಾಗಿದೆ.
ಪಾಲ್ಘರ್ ಜಿಲ್ಲೆಯ ವಸಾಯಿ ವಿಧಾನಸಭಾ ಕ್ಷೇತ್ರದಿಂದ ವಿಜಯ್ ಗೋವಿಂದ್ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅವರು ಬಹುಜನ್ ವಿಕಾಸ್ ಅಘಾಡಿಯ ಸಂಸ್ಥಾಪಕ ಹಾಗೂ ಹಾಲಿ ಶಾಸಕ ಹಿತೇಂದ್ರ ಠಾಕೂರ್ ಎದುರು ಕಣಕ್ಕಿಳಿಯಲಿದ್ದಾರೆ.
ಮಹಾ ವಿಕಾಸ್ ಅಘಾಡಿಯ ಪ್ರಮುಖ ಮಿತ್ರಪಕ್ಷಗಳಾದ ಶಿವಸೇನೆ (ಉದ್ಧವ್ ಬಣ), ಕಾಂಗ್ರೆಸ್ ಹಾಗೂ ಎನ್ಸಿಪಿ (ಶರದ್ ಪವಾರ್ ಬಣ) ತಲಾ 85 ಸ್ಥಾನಗಳನ್ನು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿವೆ.
ಮೊದಲ ಪಟ್ಟಿಯಲ್ಲಿ 48 ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಕಾಂಗ್ರೆಸ್, ಎರಡನೆ ಪಟ್ಟಿಯಲ್ಲಿ 23 ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ಇದುವರೆಗೆ 71 ಅಭ್ಯರ್ಥಿಗಳನ್ನು ಪ್ರಕಟಿಸಿದೆ.