ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಸಿಎಂ ಹೆಸರು ಅಂತಿಮ, ಹೈಕಮಾಂಡ್ ಅನುಮತಿಗೆ ಕಾಯಲಾಗುತ್ತಿದೆ : ಹಿರಿಯ ಬಿಜೆಪಿ ನಾಯಕ ದಾನವೆ
ದೇವೇಂದ್ರ ಫಡ್ನವೀಸ್ , ರಾವಸಾಹೇಬ್ ದಾನವೆ PC : PTI
ಮುಂಬೈ : ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯ ಹೆಸರು ಅಂತಿಮಗೊಂಡಿದೆ ಮತ್ತು ಪಕ್ಷದ ಹಿರಿಯ ನಾಯಕತ್ವದಿಂದ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಬಿಜೆಪಿ ನಾಯಕ ರಾವಸಾಹೇಬ್ ದಾನವೆ ಅವರು ರವಿವಾರ ಪ್ರಾದೇಶಿಕ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದು ಮಹಾರಾಷ್ಟ್ರದ ಜನತೆಗೆ ತಿಳಿದಿದೆ ಎಂದು ಮಾಜಿ ಕೇಂದ್ರ ಸಚಿವರೂ ಆದ ದಾನವೆ ಯಾವುದೇ ಹೆಸರನ್ನು ತೆಗೆದುಕೊಳ್ಳದೆ ಹೇಳಿದರು.
ನೂತನ ಮಹಾಯುತಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಡಿ.5ರಂದು ಸಂಜೆ ದಕ್ಷಿಣ ಮುಂಬೈನ ಆಝಾದ್ ಮೈದಾನದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಅವರು ಶನಿವಾರ ತಿಳಿಸಿದ್ದರು.
ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಈವರೆಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ಎರಡು ಸಲ ಮುಖ್ಯಮಂತ್ರಿ ಮತ್ತು ಏಕನಾಥ ಶಿಂದೆ ನೇತೃತ್ವದ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಹುದ್ದೆಗೆ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ನಡುವೆ ನೂತನ ಸರಕಾರವು ರೂಪುಗೊಳ್ಳುತ್ತಿರುವ ರೀತಿಯ ಬಗ್ಗೆ ತಾನು ಅಸಮಾಧಾನಗೊಂಡಿದ್ದೇನೆ ಎಂಬ ಊಹಾಪೋಹಗಳ ನಡುವೆ ಶುಕ್ರವಾರ ಸತಾರಾ ಜಿಲ್ಲೆಯ ತನ್ನ ಸ್ವಗ್ರಾಮಕ್ಕೆ ತೆರಳಿದ್ದ ಶಿಂದೆ ರವಿವಾರ ಮುಂಬೈಗೆ ಮರಳಿದ್ದು, ನೂತನ ಮುಖ್ಯಮಂತ್ರಿಯ ಬಗ್ಗೆ ಸೋಮವಾರ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
‘ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದು ಜನರಿಗೆ ಚೆನ್ನಾಗಿ ತಿಳಿದಿದೆ. ನಾವು ಅಧಿಕೃತ ಮುದ್ರೆಗಾಗಿ ಕಾಯುತ್ತಿದ್ದೇವೆ ’ಎಂದು ಹೇಳಿದ ದಾನವೆ ಸಂಪುಟ ರಚನೆ ಕುರಿತಂತೆ, ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದು ಮುಖ್ಯಮಂತ್ರಿಗಳ ವಿಶೇಷಾಧಿಕಾರವಾಗಿದೆ ಎಂದು ಹೇಳಿದರು.