ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಆರೆಸ್ಸೆಸ್ ಏಜೆಂಟ್: ಸೋತ ಕಾಂಗ್ರೆಸ್ ಅಭ್ಯರ್ಥಿ ಆರೋಪ
ನಾನಾ ಪಟೋಲೆ , ಬಂಟಿ ಶೆಳ್ಕೆ | PC : timesofindia
ಮುಂಬೈ: ಸೋಲಿನ ಪರಾಮರ್ಶೆಯನ್ನು ಪೂರ್ಣಗೊಳಿಸಲು ಮತ್ತು ಸಾಂಸ್ಥಿಕ ವಿಷಯಗಳ ಬಗ್ಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಪಕ್ಷಾಧ್ಯಕ್ಷರಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ)ಯು ಶುಕ್ರವಾರ ನಿರ್ಣಯನ್ನು ಅಂಗೀಕರಿಸಿದೆ. ಈ ನಡುವೆ ಈಗಾಗಲೇ ಭಿನ್ನಾಭಿಪ್ರಾಯಗಳು ಹೊರಹೊಮ್ಮುತ್ತಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಘಟಕವು ಸಂಘರ್ಷದ ಕಿಡಿಗಳಿಗೆ ಸಾಕ್ಷಿಯಾಗಲು ಸಜ್ಜಾಗಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಆರೆಸ್ಸೆಸ್ ಏಜೆಂಟ್ ಆಗಿದ್ದಾರೆ ಎಂದು ಆರೋಪಿಸಿರುವ ನಾಗ್ಪುರ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬಂಟಿ ಶೆಳ್ಕೆ ಅವರು, ‘ನನಗೆ ಟಿಕೆಟ್ ನೀಡಲಾಗಿತ್ತು, ಆದರೆ ಪ್ರಚಾರದ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು ನನ್ನೊಂದಿಗೆ ಇರಲಿಲ್ಲ. ರೋಡ್ಶೋ ನಡೆಸಲು ಪ್ರಿಯಾಂಕಾ ಗಾಂಧಿಯವರು ನಾಗ್ಪುರಕ್ಕೆ ಆಗಮಿಸಿದ್ದಾಗಲೂ ಪಕ್ಷದ ಯಾವುದೇ ಹಿರಿಯ ನಾಯಕರು ಬಂದಿರಲಿಲ್ಲ. ಪಟೋಲೆ ಆರೆಸ್ಸೆಸ್ಗಾಗಿ ಕೆಲಸ ಮಾಡುತ್ತಾರೆ ಎಂಬ ನನ್ನ ಹಿಂದಿನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ’ ಎಂದು ಹೇಳಿದರು.
ಪರಾಜಿತ ಅಭ್ಯರ್ಥಿಗಳೊಂದಿಗೆ ಪಕ್ಷದ ಪುನರ್ಪರಿಶೀಲನಾ ಸಭೆಯ ಬಳಿಕ ಶೆಳ್ಕೆಯವರ ಆರೋಪವು ಹೊರಬಿದ್ದಿದೆ.
ಪಕ್ಷದೊಳಗಿನ ಮೂಲಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕತ್ವವು ವಿಧಾನಸಭಾ ಚುನಾವಣೆಗಳಲ್ಲಿ ಸೋಲಿನ ಬಳಿಕ ಮತದಾರರ ದತ್ತಾಂಶಗಳು ಮತ್ತು ಮತದಾನದ ಪ್ರಮಾಣದಲ್ಲಿಯ ವ್ಯತ್ಯಾಸಗಳನ್ನು ಎತ್ತಿ ತೋರಿಸುವಲ್ಲಿ ವ್ಯಸ್ತವಾಗಿದೆ, ಆದರೆ ರಾಜ್ಯದಲ್ಲಿ ಪಕ್ಷದ ಸಾಂಸ್ಥಿಕ ವೈಫಲ್ಯದ ಕುರಿತು ಅದು ಮೌನವಾಗಿದೆ.
ಶನಿವಾರ ಶೆಳ್ಕೆಯವರಿಗೆ ಶೋಕಾಸ್ ನೋಟಿಸ್ ನೀಡಿರುವ ಮಹಾರಾಷ್ಟ್ರ ಕಾಂಗ್ರೆಸ್, ನಿಮ್ಮನ್ನು ಪಕ್ಷದಿಂದ ಏಕೆ ಅಮಾನತುಗೊಳಿಸಬಾರದು ಎನ್ನುವುದಕ್ಕೆ ಕಾರಣಸಹಿತ ಎರಡು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಉತ್ತರಿಸಲು ನೀವು ವಿಫಲರಾದರೆ ನಿಮ್ಮನ್ನು ಅಮಾನತುಗೊಳಿಸಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ನಾನಾ ಗಾವಂಡೆ ಅವರು ಹೊರಡಿಸಿರುವ ಶೋಕಾಸ್ ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಚುನಾವಣಾ ಫಲಿತಾಂಶಗಳು ಪ್ರಕಟಗೊಂಡ ದಿನದಿಂದ ನಾಯಕತ್ವವು ಭಾರತೀಯ ಚುನಾವಣಾ ಆಯೋಗದ ಅವ್ಯವಹಾರಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ ಎಂದು ಬೆಟ್ಟು ಮಾಡಿದ ಯುವ ಕಾಂಗ್ರೆಸ್ ನಾಯಕರೋರ್ವರು, ‘ಸಂಪೂರ್ಣ ಪ್ರಕ್ರಿಯೆ ಶಂಕಾಸ್ಪದವಾಗಿದೆ ಎನ್ನುವುದನ್ನು ಯಾರೂ ನಿರಾಕರಿಸುವುದಿಲ್ಲ. ಆದರೆ ನಮ್ಮ ಸಾಂಸ್ಥಿಕ ವೈಫಲ್ಯವನ್ನು ಅರಿತುಕೊಳ್ಳದೆ ನಾವು ನುಣುಚಿಕೊಳ್ಳಲು ಹೇಗೆ ಸಾಧ್ಯ? ಜವಾಬ್ದಾರಿಯನ್ನು ಹೊರುವವರು ಯಾರೂ ಇಲ್ಲವೇ?’ ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗದ ಅವ್ಯವಹಾರಗಳ ಮೇಲೆ ಗಮನ ಕೇಂದ್ರೀಕರಿಸುವ ಜೊತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಾಯಕತ್ವವನ್ನು ಒದಗಿಸುವತ್ತಲೂ ಪಕ್ಷವು ಗಮನ ಹರಿಸಬೇಕಾದ ಅಗತ್ಯವಿದೆ,ನಿರಂಕುಶ ರೀತಿಯಲ್ಲಿ ಕೆಲಸ ಮಾಡಬಾರದು ಎಂದು ಹೇಳಿದ ಇನ್ನೋರ್ವ ಹಿರಿಯ ಕಾಂಗ್ರಸ್ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವರೋರ್ವರು,‘ಸಾಂಸ್ಥಿಕ ಆತ್ಮಾವಲೋಕನವು ಮುಖ್ಯವಾಗಿದೆ,ಮುಂಬರುವ ತಿಂಗಳುಗಳಲ್ಲಿ ನಡೆಯಲಿರುವ ಪಕ್ಷದ ಸಭೆಗಳಲ್ಲಿ ನಾವಿದನ್ನು ಪ್ರಸ್ತಾವಿಸುತ್ತೇವೆ ’ ಎಂದು ಹೇಳಿದರು.