ಮಹಾರಾಷ್ಟ್ರ ಡಿಸಿಎಂಗಿಂತ ಪತ್ನಿ ಶ್ರೀಮಂತೆ; ದಶಕದಲ್ಲಿ ಫಡ್ನವೀಸ್ ಸಂಪತ್ತು ಹಲವು ಪಟ್ಟು ಹೆಚ್ಚಳ
PC: x.com/Dev_Fadnavis
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಲ್ಕನೇ ದಿನವಾದ ಶುಕ್ರವಾರ 991 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಡಿಸಿಎಂ ದೇವೇಂದ್ರ ಫಡ್ನವೀಸ್ (ನಾಗ್ಪುರ ನೈರುತ್ಯ), ಕೃಷ್ಣ ಕೋಪ್ಡೆ (ನಾಗ್ಪುರ ಪೂರ್ವ), ಅತುಲ್ ಸಾವೆ (ಔರಂಗಾಬಾದ್ ಪೂರ್ವ), ಸಂಜಯ್ ಶೀರ್ಷತ್ (ಔರಂಗಾಬಾದ್ ಪಶ್ಚಿಮ) ಮತ್ತು ರಾಮಶಿಂಧೆ (ಕರ್ಜತ್ ಜಮಖೇಡ್) ನಾಮಪತ್ರ ಸಲ್ಲಿಸಿದ ಪ್ರಮುಖರು. ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಮಾತ್ರ ಸಾಂಪ್ರದಾಯಿಕ ಪವಿತ್ರ ಶುಕ್ರವಾರವನ್ನು ಬಿಟ್ಟು ಮುಂದಿನ ಸೋಮವಾರ ನಾಮಪತ್ರ ಸಲ್ಲಿಸುವರು. ಚುನಾವಣಾ ಆಯೋಗ ಇದುವರೆಗೆ 1288 ನಾಮಪತ್ರಗಳನ್ನು ಸ್ವೀಕರಿಸಿದೆ.
ಅದ್ದೂರಿ ಮೆರವಣಿಗೆಯಲ್ಲಿ ಬಂದ ಫಡ್ನವೀಸ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್ nಲ್ಲಿ ಹಲವು ಕುತೂಹಲಕರ ಅಂಶಗಳು ಬೆಳಕಿಗೆ ಬಂದಿವೆ. ಕಳೆದ ಒಂದು ದಶಕದಲ್ಲಿ ಡಿಸಿಎಂ ಹಾಗೂ ಅವರ ಪತ್ನಿಯ ಸಂಪತ್ತು ಹಲವು ಪಟ್ಟು ಏರಿಕೆಯಾಗಿದೆ. 2014-15ನೇ ಹಣಕಾಸು ವರ್ಷದಲ್ಲಿ ಫಡ್ನವೀಸ್ 1.24 ಲಕ್ಷ ರೂಪಾಯಿ ಆದಾಯ ತೋರಿಸಿದ್ದರೆ, ಪತ್ನಿಯ ಆದಾಯ 18.27 ಲಕ್ಷ ರೂಪಾಯಿ ಆಗಿತ್ತು. ಆದರೆ 2023-24ನೇ ಹಣಕಾಸು ವರ್ಷದಲ್ಲಿ ಇದು ಕ್ರಮವಾಗಿ 38.73 ಲಕ್ಷ ಹಾಗೂ 79.30 ಲಕ್ಷಕ್ಕೆ ಹೆಚ್ಚಿದೆ.
2019-20ರಿಂದ 2023-24ರವರೆಗೆ ಫಡ್ನವೀಸ್ 1.66 ಕೋಟಿ ರೂಪಾಯಿ ಆದಾಯ ಗಳಿಸಿದ್ದರೆ, ಅವರ ಪತ್ನಿ ಅಮೃತಾ ಫಡ್ನವೀಸ್ ಈ ಅವಧಿಯಲ್ಲಿ 5.05 ಕೋಟಿ ರೂಪಾಯಿ ಆದಾಯ ಪಡೆದಿದ್ದಾರೆ. ಫಡ್ನವೀಸ್ ಗೆ 62 ಲಕ್ಷ ರೂಪಾಯಿ ಸಾಲ ಇದ್ದು, ನಾಲ್ಕು ಅಪರಾಧ ಪ್ರಕರಣಗಳು ಇವರ ವಿರುದ್ಧ ಬಾಕಿ ಇವೆ. ಕಳೆದ ಐದು ವರ್ಷದಲ್ಲಿ ಡಿಸಿಎಂ ದಂಪತಿ 4.57 ಕೋಟಿ ರೂಪಾಯಿ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಈ ದಂಪತಿ 99 ಲಕ್ಷ ರೂಪಾಯಿ ಮೌಲ್ಯದ 1.35 ಕೆಜಿ ಚಿನ್ನ ಸೇರಿದಂತೆ 13.27 ಕೋಟಿ ರೂಪಾಯಿ ಸಂಪತ್ತು ಹೊಂದಿದ್ದಾರೆ. ಆದರೂ ಇವರಿಗೆ ಸ್ವಂತ ಕಾರು ಇಲ್ಲ.
2019ರಲ್ಲಿ ಫಡ್ನವೀಸ್ ದಂಪತಿಯ ಒಟ್ಟು ಚರಾಸ್ತಿ ಮೌಲ್ಯ 45.94 ಲಕ್ಷ ರೂಪಾಯಿ ಇತ್ತು. ಅದು ಈಗ 7.52 ಕೋಟಿ ರೂಪಾಯಿಗೆ ಹೆಚ್ಚಿದೆ. ಅಂತೆಯೇ ಸ್ಥಿರಾಸ್ತಿ ಮೌಲ್ಯ 3.78 ಕೋಟಿ ರೂಪಾಯಿಯಿಂದ 5.63 ಕೋಟಿ ರೂಪಾಯಿಗೆ ಹೆಚ್ಚಿದೆ.