ಮಹಾರಾಷ್ಟ್ರ: ಭೂಕುಸಿತ 16 ಮಂದಿ ಸಾವು, ಹಲವರು ಮಣ್ಣಿನಡಿ ಸಿಲುಕಿರುವ ಭೀತಿ
Photo: PTI
ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಬುಧವಾರ ರಾತ್ರಿ ಸಂಭವಿಸಿದ ಭೂಕುಸಿತದಿಂದ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಮಣ್ಣಿನ ಅಡಿ ಸಿಲುಕಿರುವ ಭೀತಿ ಉಂಟಾಗಿದೆ.
‘‘ರಾಯಗಢ ಜಿಲ್ಲೆಯ ಇರ್ಸಲ್ ಗಡ್ ಗ್ರಾಮದ ಸಮೀಪ ಬುಧವಾರ ರಾತ್ರಿ 10.30ಕ್ಕೆ ಈ ದುರಂತ ಸಂಭವಿಸಿದೆ. ಇದು ದುರ್ಗಮ ಪ್ರದೇಶ. ಆದುದರಿಂದ ಪರಿಹಾರ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಹಲವರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ. ಎನ್ಡಿಆರ್ಎಫ್ ಹಾಗೂ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ’’ ಎಂದು ಮಹಾರಾಷ್ಟ್ರದ ಕೈಗಾರಿಕೆ ಸಚಿವ ಉದಯ್ ಸಮಂತ್ ತಿಳಿಸಿದ್ದಾರೆ.
ಗ್ರಾಮದ 40ರಲ್ಲಿ 17 ಮನೆಗಳು ಮಣ್ಣಿನಡಿ ಹೂತು ಹೋಗಿದೆ ಎಂದು ಎನ್ಡಿಆರ್ಎಫ್ ನ ಐದನೇ ಬೆಟಾಲಿಯನ್ನ ಕಮಾಂಡೆಂಟ್ ಎಸ್.ಬಿ. ಸಿಂಗ್ ಅವರು ಹೇಳಿದ್ದಾರೆ. ‘‘ನಾವು ರಕ್ಷಣಾ ಕಾರ್ಯಾಚರಣೆಗೆ ನಾಲ್ಕು ತಂಡಗಳನ್ನು ನಿಯೋಜಿಸಿದ್ದೇವೆ.
ಕೆಲವು ಸ್ಥಳಗಳಲ್ಲಿ ನೆಲ 10ರಿಂದ 29 ಅಡಿ ಆಳದ ವರೆಗೆ ಕುಸಿದಿದೆ. ದುರಂತ ಸಂಭವಿಸಿದ ಪ್ರದೇಶಕ್ಕೆ ತಲುಪುವ 2.8 ಕಿ.ಮೀ. ದಾರಿ ದುರ್ಗಮವಾಗಿದೆ. ಆದುದರಿಂದ ಭಾರೀ ಯಂತ್ರಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ನಾವು ಕೆಲಸಗಾರರನ್ನು ಬಳಸಿ ಮಣ್ಣು ತೆಗೆಯುತ್ತಿದ್ದೇವೆ. ಇದರಿಂದ ಹೆಚ್ಚು ಸಮಯ ಹಿಡಿಯುತ್ತಿದೆ. ಆದರೂ ಕೊನೆಯ ವ್ಯಕ್ತಿ ಸಿಗುವ ವರೆಗೆ ಕಾರ್ಯಾಚರಣೆ ಮುಂದುವರಿಸಲಿದ್ದೇವೆ’’ ಎಂದು ಸಿಂಗ್ ಹೇಳಿದ್ದಾರೆ.
ಈ ಗ್ರಾಮದಲ್ಲಿ 200ಕ್ಕೂ ಅಧಿಕ ಜನರಿದ್ದಾರೆ. ಇವರಲ್ಲಿ ಸುಮಾರು 80 ಜನರು ಜೀವಂತವಾಗಿರುವುದು ದೃಢಪಟ್ಟಿದೆ. ಕೆಲವರು ಭೂಕುಸಿತ ಸಂಭವಿಸಿದ ಸಂದರ್ಭ ಬೇರೆಡೆ ಇದ್ದರು ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನಾವಿಸ್ ಹೇಳಿದ್ದಾರೆ. ಮಣ್ಣಿನ ಅಡಿ ಸಿಲುಕಿರುವ ಜನರ ಖಚಿತ ಸಂಖ್ಯೆ ತಿಳಿದಿಲ್ಲ ಎಂದು ಫಡ್ನಾವಿಸ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ ಶಿಂಧೆ ದುರಂತ ನಡೆದ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದಾರೆ. ಅಲ್ಲದೆ, ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.