ಮಹಾರಾಷ್ಟ್ರ: ಆ್ಯಂಬುಲೆನ್ಸ್ ಸಿಗದೇ ಇಬ್ಬರು ಮಕ್ಕಳ ಮೃತದೇಹವನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ-ತಾಯಿ
PC : NDTV
ಮಹಾರಾಷ್ಟ್ರ: ಜ್ವರದಿಂದ ಮೃತಪಟ್ಟ ಇಬ್ಬರು ಮಕ್ಕಳ ಮೃತದೇಹವನ್ನು ಆ್ಯಂಬುಲೆನ್ಸ್ ಸಿಗದ ಕಾರಣ ತಂದೆ-ತಾಯಿ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಯಿಂದ 15 ಕಿ.ಮೀ. ದೂರದಲ್ಲಿರುವ ಮನೆಗೆ ಕೊಂಡೊಯ್ದಿರುವ ಹೃದಯವಿದ್ರಾಹಕ ಘಟನೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಪಡ್ನಾವೀಸ್ ಅವರ ಉಸ್ತುವಾರಿ ಕ್ಷೇತ್ರದಲ್ಲಿ ನಡೆದಿದೆ.
ದಂಪತಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಬಾಲಕರ ಮೃತದೇಹಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಕೆಸರಿನಿಂದ ತುಂಬಿಕೊಂಡಿದ್ದ ಕಾಡಿನಲ್ಲಿ ಸಾಗುತ್ತಿರುವ ವಿಡಿಯೋವನ್ನು ಮಹರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಾಡೆತ್ತಿವಾರ್ ಅವರು ಹಂಚಿಕೊಂಡಿದ್ದಾರೆ.
ಇಬ್ಬರು ಸಹೋದರರು ಜ್ವರದಿಂದ ಬಳಲುತ್ತಿದ್ದರು, ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಕೆಲವೇ ಗಂಟೆಗಳಲ್ಲಿ ಅವರ ಸ್ಥಿತಿಯು ತೀರಾ ಹದಗೆಟ್ಟು ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವಾಡೆತ್ತಿವಾರ್ ವಿಡಿಯೋ ಹಂಚಿಕೊಂಡು ಮಾಹಿತಿಯನ್ನು ನೀಡಿದ್ದಾರೆ.
दोन्ही लेकरांचे ‘मृतदेह’ खांद्यावर घेऊन चिखलातून वाट शोधत पुढे जात असलेले हे दाम्पत्य गडचिरोली जिल्ह्यातील अहेरी तालुक्यातील आहे.
— Vijay Wadettiwar (@VijayWadettiwar) September 5, 2024
आजोळी आलेल्या दोन भावंडांना ताप आला. वेळेत उपचार मिळाले नाही. दोन तासांतच दोघांचीही प्रकृती खालावली व दीड तासांच्या अंतराने दोघांनीही अखेरचा श्वास… pic.twitter.com/ekQBQHXeGu
ಇಬ್ಬರು ಬಾಲಕರ ಮೃತದೇಹಗಳನ್ನು ಸಾಗಿಸಲು ಪಟ್ಟಿಗಾಂವ್ಗೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿಲ್ಲ. ದುಃಖತಪ್ತ ಪೋಷಕರು ಮಳೆಯಿಂದಾಗಿ ಕೆಸರು ತುಂಬಿದ ಹಾದಿಯಲ್ಲಿ 15 ಕಿಮೀ ನಡೆದುಕೊಂಡು ಹೋಗಬೇಕಾಯಿತು. ಗಡ್ಚಿರೋಲಿಯಲ್ಲಿ ಆರೋಗ್ಯ ಅವ್ಯವಸ್ಥೆಯ ಬಗೆಗಿನ ಕಠೋರ ವಾಸ್ತವ ಮತ್ತೆ ಬಯಲಾಗಿದೆ ಎಂದು ಹೇಳಿದ್ದಾರೆ.
ಮಹಾಯುತಿ ಮಿತ್ರಪಕ್ಷಗಳಾದ ಭಾರತೀಯ ಜನತಾ ಪಕ್ಷದ ಫಡ್ನವೀಸ್ ಅವರು ಗಡ್ಚಿರೋಲಿಯ ಉಸ್ತುವಾರಿ ಸಚಿವರಾಗಿದ್ದಾರೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಧರ್ಮರಾವ್ ಬಾಬಾ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇಬ್ಬರೂ ನೆಲಮಟ್ಟಕ್ಕೆ ಇಳಿದು ಗಡ್ಚಿರೋಲಿಯಲ್ಲಿ ಜನರು ಹೇಗೆ ವಾಸಿಸುತ್ತಿದ್ದಾರೆ ಎಂಬುವುದನ್ನು ತಿಳಿಯಬೇಕು ಎಂದು ವಾಡೆತ್ತಿವಾರ್ ಆಗ್ರಹಿಸಿದ್ದಾರೆ.