ಅಜಿತ್ ಪವಾರ್ ಬಣವನ್ನು ನೈಜ ಎನ್ಸಿಪಿ ಎಂದು ಘೋಷಿಸಿದ ಮಹಾರಾಷ್ಟ್ರ ಸ್ಪೀಕರ್ : ಅನರ್ಹತೆ ಕೋರಿದ್ದ ಅರ್ಜಿಗಳು ತಿರಸ್ಕೃತ
ಅಜಿತ್ ಪವಾರ್ | Photo : PTI
ಮುಂಬೈ: ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ನೈಜ ಎನ್ಸಿಪಿಯ ನಾಯಕರಾಗಿದ್ದಾರೆ ಎಂದು ನಿರ್ಧರಿಸಿ ಚುನಾವಣಾ ಆಯೋಗದ ಇತ್ತೀಚಿನ ಆದೇಶವನ್ನು ಉಲ್ಲೇಖಿಸಿದ ಮಹಾರಾಷ್ಟ್ರದ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಅಜಿತ್ ಬಣದ 41 ಶಾಸಕರ ಅನರ್ಹತೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಗುರುವಾರ ತಿರಸ್ಕರಿಸಿದರು.
ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯು ನಿಜವಾದ ರಾಜಕೀಯ ಪಕ್ಷವಾಗಿದೆ. ಅಜಿತ್ ಪವಾರ್ 41 ಶಾಸಕರೊಂದಿಗೆ ಶಾಸಕಾಂಗ ಬಹುಮತವನ್ನು ಹೊಂದಿದ್ದಾರೆ. ಇದು ವಿವಾದಾತೀತವಾಗಿದೆ ಎಂದು ಸ್ಪೀಕರ್ ಹೇಳಿದರು.
ಅಜಿತ್ ಪವಾರ್ ಅವರು ಜುಲೈ 2023ರಲ್ಲಿ ತನ್ನ ಬೆಂಬಲಿಗರೊಂದಿಗೆ ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಸರಕಾರವನ್ನು ಸೇರಿದ್ದರು ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಪರಸ್ಪರ ಶಾಸಕರ ಅನರ್ಹತೆ ಕೋರಿ ಅಜಿತ್ ಪವಾರ್ ಮತ್ತು ಎನ್ಸಿಪಿ ಸ್ಥಾಪಕ ಶರದ್ ಪವಾರ್ ನೇತೃತ್ವದ ಬಣಗಳು ಅರ್ಜಿಗಳನ್ನು ಸಲ್ಲಿಸಿದ್ದವು.
ಪಕ್ಷದ ಸ್ಥಾಪಕ ಶರದ್ ಪವಾರ್ ಅವರ ನಿರ್ಣಯಗಳನ್ನು ಪ್ರಶ್ನಿಸುವುದು ಅಥವಾ ಅವರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುವುದು ಪಕ್ಷಾಂತರವಲ್ಲ,ಅದು ಕೇವಲ ಆಂತರಿಕ ಭಿನ್ನಾಭಿಪ್ರಾಯವಾಗಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿರುವ ನಾರ್ವೇಕರ್, ಪಕ್ಷಾಂತರ ನಿಷೇಧ ನಿಬಂಧನೆಗಳಿಗೆ ಸಂಬಂಧಿಸಿದ ಸಂವಿಧಾನದ 10ನೇ ಅನುಸೂಚಿಯನ್ನು ಈ ಪ್ರಕರಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಶಾಸಕರನ್ನು ಅನರ್ಹಗೊಳಿಸುವುದಾಗಿ ಬೆದರಿಕೆಯೊಡ್ಡುವ ಮೂಲಕ ಭಿನ್ನಾಭಿಪ್ರಾಯದ ಧ್ವನಿಯನ್ನಡಗಿಸಲು 10ನೇ ಅನುಸೂಚಿಯನ್ನು ಪಕ್ಷದ ನಾಯಕತ್ವವು ಬಳಸುವಂತಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷವು ವಿಭಜನೆಗೊಂಡಾಗ ಅಜಿತ್ ಪವಾರ್ ಬಣವು ಅಗಾಧ ಬಹುಮತವನ್ನು ಹೊಂದಿತ್ತು ಎಂದೂ ಅವರು ಬೆಟ್ಟು ಮಾಡಿದ್ದಾರೆ.
ಈ ನಡುವೆ, 2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಶರದ್ ಪವಾರ್ ನೇತೃತ್ವದ ಎನ್ಸಿಪಿ ಮತ್ತು ಕಾಂಗ್ರೆಸ್ ವಿಲೀನದ ವದಂತಿಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ. ಆದರೆ ಇದನ್ನು ನಿರಾಕರಿಸಿರುವ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು, ತನ್ನ ಬಣವು ಇತರ ಯಾವುದೇ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳುವ ಯೋಚನೆಯನ್ನು ಹೊಂದಿಲ್ಲ. ಶರದ್ ಪವಾರ್ ನೇತೃತ್ವದ ಎನ್ಸಿಪಿಯು ಚುನಾವಣೆಗಳಲ್ಲಿ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಭಾಗವಾಗಿ ಹೋರಾಡುವುದನ್ನು ಮುಂದುವರಿಸುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.