ಮಹಾರಾಷ್ಟ್ರ: ಕೇವಲ 48 ಮತಗಳಿಂದ ಗೆದ್ದ ಅಭ್ಯರ್ಥಿ
ರವೀಂದ್ರ ವೈಕರ್ | PC : hindustantimes.com
ಮುಂಬೈ: ಲೋಕಸಭಾ ಚುನಾವಣೆಯಲ್ಲಿ, ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನಾ ಬಣದ ಅಭ್ಯರ್ಥಿ ರವೀಂದ್ರ ವೈಕರ್ ಅವರು ಉದ್ಧವ್ ಬಾಳಾ ಠಾಕ್ರೆ ನೇತೃತ್ವದ ಶಿವಸೇನಾ ಅಭ್ಯರ್ಥಿ ಅಮೋಲ್ ಕೀರ್ತಿಕರ್ ರನ್ನು ಕೇವಲ 48 ಮತಗಳಿಂದ ಸೋಲಿಸಿದ್ದಾರೆ.
ಇದು 2024ರ ಲೋಕಸಭಾ ಚುನಾವಣೆಯ ಅತ್ಯಂತ ನಿಕಟ ಸ್ಪರ್ಧೆಯಾಗಿದೆ. ವೈಕರ್ಗೆ 4,52,644 ಮತಗಳು ಬಿದ್ದರೆ, ಕೀರ್ತಿಕರ್ ಗೆ 4,52,596 ಮತಗಳು ಬಿದ್ದಿವೆ.
ಮತಗಳ ಮರುಎಣಿಕೆ ನಡೆದ ಬಳಿಕ, ವೈಕರ್ರನ್ನು ವಿಜಯಿ ಎಂಬುದಾಗಿ ಘೋಷಿಸಲಾಯಿತು. ಆರಂಭದಲ್ಲಿ, ಕೀರ್ತಿಕರ್ ಗೆದ್ದಂತೆ ಕಂಡುಬಂದರು. ಆದರೆ, ವಿಜಯದ ಅಂತರ ಕಡಿಮೆಯಿದ್ದುದರಿಂದ ಮತಗಳ ಮರು ಎಣಿಕೆಗೆ ವೈಕರ್ ಬೇಡಿಕೆ ಸಲ್ಲಿಸಿದರು.
ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದಾಖಲಾದ ಮತಗಳ ಮರುಎಣಿಕೆ ನಡೆದ ಬಳಿಕ, ವೈಕರ್ಗಿಂತ ಕೀರ್ತಿಕರ್ ಗೆ ಇನ್ನೂ ಒಂದು ಹೆಚ್ಚು ಮತಗಳು ಬಿದ್ದಿರುವುದು ಪತ್ತೆಯಾಯಿತು. ಆದರೆ, ಅಂಚೆ ಮತಗಳ ಮರು ಎಣಿಕೆ ನಡೆದ ಬಳಿಕ, ವೈಕರ್ ತನ್ನ ಎದುರಾಳಿಗಿಂತ 48 ಮತಗಳ ಅಂತರದಿಂದ ಮುಂದಿದ್ದರು.
ಕೀರ್ತಿಕರ್ ತಂದೆ ಗಜಾನನ ಕೀರ್ತಿಕರ್ ಮುಂಬೈ ವಾಯುವ್ಯ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಅವರು ಈಗ ಶಿಂದೆ ಬಣದ ಶಿವಸೇನೆಯಲ್ಲಿದ್ದಾರೆ.
ಠಾಕ್ರೆ ನೇತೃತ್ವದ ಶಿವಸೇನೆಯು ಮುಂಬೈಯಲ್ಲಿ ಮೂರು ಸ್ಥಾನಗಳನ್ನು ಗೆದ್ದಿದೆ- ಮುಂಬೈ ದಕ್ಷಿಣ, ಮುಂಬೈ ದಕ್ಷಿಣ ಮಧ್ಯ ಮತ್ತು ಮುಂಬೈ ವಾಯುವ್ಯ. ಅದರ ಇಂಡಿಯಾ ಮೈತ್ರಿಕೂಟದ ಭಾಗೀದಾರ ಕಾಂಗ್ರೆಸ್ ಮುಂಬೈ ಉತ್ತರ ಮಧ್ಯ ಕ್ಷೇತ್ರವನ್ನು ಗೆದ್ದಿದೆ.
ಮಹಾರಾಷ್ಟ್ರದ ಒಟ್ಟು 48 ಸ್ಥಾನಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 9, ಶಿವಸೇನೆ (ಉದ್ಧವ್ ಠಾಕ್ರೆ) 9, ಎನ್ಸಿಪಿ (ಶರದ್ ಪವಾರ್) 8, ಶಿವಸೇನೆ (ಶಿಂದೆ) ಏಳು ಸ್ಥಾನಗಳನ್ನು ಗೆದ್ದಿದೆ. ಎನ್ಸಿಪಿಯ ಅಜಿತ್ ಪವಾರ್ ಬಣ ಒಂದು ಮತ್ತು ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಗೆದ್ದಿದ್ದಾರೆ.
ನ್ಯಾಯಾಲಯದಲ್ಲಿ ಪ್ರಶ್ನಿಸುವೆ: ಠಾಕ್ರೆ
ಮುಂಬೈ ವಾಯುವ್ಯ ಕ್ಷೇತ್ರದ ಮತಗಳ ಎಣಿಕೆ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳು ಕಂಡುಬಂದಿವೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ತನ್ನ ಪಕ್ಷವು ಈ ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ಹೇಳಿದರು.