ಮಹಾರಾಷ್ಟ್ರ ಚುನಾವಣೆ | ಲಕ್ಷ ಮತ ಗಳಿಸಿಯೂ ಸೋತ ಪ್ರಮುಖರು!
Photo : PTI
ಪುಣೆ : ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್, ಮಾಜಿ ಸಚಿವ ಬಾಳಾಸಾಹೇಬ್ ಥೋರಟ್, ಕಾಂಗ್ರೆಸ್ ಅಭ್ಯರ್ಥಿಗಳಾದ ಧೀರಜ್ ದೇಶಮುಖ್ (ಲಾಥೂರ್ ಗ್ರಾಮೀಣ) ಮತ್ತು ಸಂಗ್ರಾಮ್ ಥೋಪ್ಟೆ (ಭೋರ್), ಎನ್ಸಿಪಿಯ ಸುನೀಲ್ ಟಿಂಗ್ರೆ ಸೇರಿದಂತೆ 60 ಗಣ್ಯರು ಒಂದು ಲಕ್ಷಕ್ಷಿಂತ ಅಧಿಕ ಮತಗಳನ್ನು ಗಳಿಸಿದರೂ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.
ಈ ಪೈಕಿ ಗರಿಷ್ಠ ಅಂದರೆ 22 ಅಭ್ಯರ್ಥಿಗಳು ಎನ್ಸಿಪಿ (ಎಸ್ಪಿ) ಪಕ್ಷಕ್ಕೆ ಸೇರಿದವರು ಕಾಂಗ್ರೆಸ್ನ 16 ಅಭ್ಯರ್ಥಿಗಳು ಈ ಪಟ್ಟಿಯಲ್ಲಿದ್ದು, ಪುಣೆ ಹಾಗೂ ಛತ್ರಪತಿ ಸಂಭಾಜಿನಗರ ಜಿಲ್ಲೆಗಳಲ್ಲಿ ಲಕ್ಷ ಮತಕ್ಕಿಂತ ಹೆಚ್ಚು ಗಳಿಸಿ ಸೋತವರು ಅಧಿಕ. ಇಲ್ಲಿ ಗೆಲುವಿನ ಅಂತರ ಕೆಲವು ನೂರು ಮತಗಳಿಂದ ಹಿಡಿದು ಕೆಲವು ಸಾವಿರ ವರೆಗೂ ಇದೆ.
ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಕರಡ್ ದಕ್ಷಿಣ ಕ್ಷೇತ್ರದಲ್ಲಿ 1,00,150 ಮತಗಳನ್ನು ಪಡೆದಿದ್ದಾರೆ. ಆದರೆ ವಿಜೇತ ಬಿಜೆಪಿ ಅಭ್ಯರ್ಥಿ ಗಳಿಸಿದ ಮತಗಳ ಸಂಖ್ಯೆ 1,39,505. ಕಾಂಗ್ರೆಸ್ ಮಾಜಿ ಅಧ್ಯಕ್ಷ ಥೋರಟ್ 10,560 ಮತಗಳ ಅಂತರದಿಂದ ಸೋತಿದ್ದು, ಶಿವಸೇನೆಯ ಅಮೋಲ್ ಖಾತಲ್ 1,12,386 ಮತ ಗಳಿಸಿದರು. ಧೀರಜ್ ದೇಶಮುಖ್ ಲಾಥೂರ್ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಕರಡ್ (1,12,051) ವಿರುದ್ಧ 6595 ಮತಗಳಿಂದ ಸೋತಿದ್ದು, ಹಾಲಿ ಶಾಸಕರೂ ಆಗಿದ್ದ ದೇಶಮುಖ್ 1,05,456 ಮತ ಪಡೆದರು.
ಶಿವಸೇನೆ-ಯುಬಿಟಿಯ ಏಳು ಮಂದಿ, ಬಿಜೆಪಿಯ ಐವರು, ಎನ್ಸಿಪಿಯ ಇಬ್ಬರು, ಶಿವಸೇನೆಯ ಒಬ್ಬರು, ಇತರ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿ ಏಳು ಮಂದಿ ಇದರಲ್ಲಿ ಸೇರಿದ್ದಾರೆ.