ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ದಿಗ್ವಿಜಯ, ಜಾರ್ಖಂಡ್ ಜೆಎಂಎಂ ಜಯಭೇರಿ
►ಮಹಾವಿಕಾಸ್ ಅಗಾಡಿ ಧೂಳೀಪಟ ► ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಶಿವಸೇನಾ (ಶಿಂಧೆ)-ಬಿಜೆಪಿ ನೇತೃತ್ವದ ಮೈತ್ರಿಕೂಟ ►ಜಾರ್ಖಂಡ್ನಲ್ಲಿ ಮತ್ತೆ ಸೊರೇನ್ ಸರಕಾರ
PC : PTI
ಮುಂಬೈ/ರಾಂಚಿ : ದೇಶಾದ್ಯಂತ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಮತಏಣಿಕೆ ಶನಿವಾರ ನಡೆದಿದ್ದು, ಎರಡೂ ರಾಜ್ಯಗಳಲ್ಲಿಯೂ ಆಡಳಿತಾರೂಢ ಪಕ್ಷಗಳನ್ನು ಮತದಾರರು ಭರ್ಜರಿ ಬಹುಮತದೊಂದಿಗೆ ಗೆಲ್ಲಿಸಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ (ಎವಿಎ)ವು 231 ಸ್ಥಾನಗಳನ್ನು ಪಡೆದಿದ್ದು, ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಮೈತ್ರಿಕೂಟ ಮಹಾವಿಕಾಸ್ ಅಘಾಡಿ (ಎಂವಿಎ)ಗೆ ಧೂಳೀಪಟವಾಗಿದ್ದು, ಕೇವಲ 47 ಸ್ಥಾನಗಳನ್ನು ಪಡೆದು ಮುಖಭಂಗ ಅನುಭವಿಸಿದೆ. ಮಹಾರಾಷ್ಟ್ರದಲ್ಲಿ ಕಳೆದುಕೊಂಡಿರುವ ಅಧಿಕಾರವನ್ನು ಮತ್ತೆ ಪಡೆಯುವ ಎಂವಿಎ ಕನಸು ನುಚ್ಚುನೂರಾಗಿದೆ.
ಮಹಾಯುತಿ (ಎಂವೈಎ) ಮೈತ್ರಿಕೂಟದಲ್ಲಿ, ಬಿಜೆಪಿಯು ಸ್ಪರ್ಧಿಸಿದ್ದ 148 ಕ್ಷೇತ್ರಗಳ ಪೈಕಿ 132 ಸ್ಥಾನಗಳನ್ನು ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನಾವು 81 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಆ ಪೈಕಿ 57 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 59 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 51 ಕ್ಷೇತ್ರಗಳಲ್ಲಿ ಗೆಲುವಿನ ನಗೆಬೀರಿದೆ.
ಇತ್ತ ಮಹಾಯುತಿ ಒಕ್ಕೂಟದ ಬಹುತೇಕ ಎಲ್ಲಾ ಮುಖಂಡರು ಜಯಮಾಲೆ ಒಲಿದಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕೊಪ್ರಿ-ಪಾಚ್ಪಖಾಡಿ ಕ್ಷೇತ್ರದಲ್ಲಿ ಪ್ರಚಂಡ ಗೆಲುವು ದಾಖಲಿಸಿದ್ದಾರೆ. ಹಾಗೆಯೇ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಅವರು ನಾಗಪುರ (ನೈಋತ್ಯ) ಮತ್ತು ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ಜಯಬೇರಿಸಿ ಬಾರಿಸಿದ್ದಾರೆ. ಮತಏಣಿಕೆಯ ಆರಂಭದಿಂದಲೇ ಮಹಾಯುತಿ ಒಕ್ಕೂಟದ ಬಹುತೇಕ ಅಭ್ಯರ್ಥಿಗಳು ಗೆಲುವಿನೆಡೆಗೆ ನಾಗಾಲೋಟದಿಂದ ಸಾಗುತ್ತಿರುವುದು ಕಂಡುಬಂದಿತ್ತು.
ಮಹಾವಿಕಾಸ್ ಅಘಾಡಿಯ ಹಲವು ಮುಖಂಡರು ಸೋಲನ್ನಪ್ಪಿರುವುದು, ಪ್ರತಿಪಕ್ಷ ಮೈತ್ರಿಕೂಟದ ಸೋಲಿನ ಗಾಯಕ್ಕೆ ಬರೆ ಎಳೆದಂತಾಗಿದೆ. ಆದರೆ ಶಿವಸೇನಾ (ಉದ್ಧವ್)ದ ನಾಯಕ ಆದಿತ್ಯ ಠಾಕ್ರೆ ವರ್ಲಿಯಲ್ಲಿ ಗೆಲುವು ಸಾಧಿಸಿದ್ದಾರೆ. ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಸಕೋಲಿ ಕ್ಷೇತ್ರದಲ್ಲಿ ವಿಜಯಿಯಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಕರಾಡ್ ದಕ್ಷಿಣ ಕ್ಷೇತ್ರದಲ್ಲಿ ಪರಾಭಗೊಂಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಶಿಂಧೆ ಸರಕಾರ ಜಾರಿಗೊಳಿಸಿದ್ದ ಮಹಿಳೆಯರಿಗೆ 1500 ರೂ. ಮಾಸಿಕ ಧನ ನೀಡುವ ‘ಲಡ್ಕಿ ಬೆಹನ್ ಯೋಜನೆ’ಯ ಯಶಸ್ಸು ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಕ್ಷೇತ್ರಗಳಿಗೆ ನವೆಂಬರ್ 20ರಂದು ಮತದಾನವಾಗಿತ್ತು.
►ಜಾರ್ಖಂಡ್ನಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಪಚಂಡ ಬಹುಮತ
ಬುಡಕಟ್ಟು ರಾಜ್ಯವಾದ ಜಾರ್ಖಂಡ್ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜೆಎಂಎಂ ನೇತೃತ್ವದ ಮೈತ್ರಿಕೂಟವು ಭರ್ಜರಿ ಗೆಲವು ಸಾಧಿಸಿದೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟವು 54 ಸ್ಥಾನಗಳನ್ನು ಪ್ರಚಂಡ ಬಹುಮತವನ್ನು ಗಳಿಸಿದೆ.
ಮೂರನೇ ಬಾರಿ ಅಧಿಕಾರಕ್ಕೇರಿದೆ. ಜಾರ್ಖಂಡ್ನಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಶತಾಯಗತಾಯ ಯತ್ನಿಸಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು, ಕೇವಲ 26 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಬಹುತೇಕ ಚುನಾವಣಾ ಸಮೀಕ್ಷೆಗಳು ಜಾರ್ಖಂಡ್ ನಲ್ಲಿ ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಅತ್ಯಂತ ತೀವ್ರ ಹಣಾಹಣಿ ಏರ್ಪಡಲಿದೆಯೆಂದು ಭವಿಷ್ಯ ನುಡಿದಿದ್ದವು. ಆದರೆ ಆ ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟವು ಪಚಂಡ ಗೆಲುವನ್ನು ದಾಖಲಿಸಿದೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಬರಾಹೈತ್ ಕ್ಷೇತ್ರದಲ್ಲಿ ಹೇಮಂತ್ ಸೊರೇನ್ ಅವರು 39,791 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಗಂಡೇಯಿ ಕ್ಷೇತ್ರದಲ್ಲಿ ಅವರ ಪತ್ನಿ ಕಲ್ಪನಾ ಸೊರೇನ್ ಕೂಡಾ 17 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿಯ ಮುನಿಯಾ ದೇವಿ ಅವರನ್ನು ಸೋಲಿಸಿದ್ದಾರೆ.
ಬಿಜೆಪಿಯ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಧನ್ವಾರ್ನಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಜೆಎಂಎಂನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಮಾಜಿ ಮುಖ್ಯಮಂತ್ರಿ ಚಂಪಾಯಿ ಸೊರೇನ್ ಸೆರಾಯಿಕೇಲಾ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ.