ಸಜೀವ್, ವಿನೀತಾರ ಮನೆ ಜಪ್ತಿ ತಪ್ಪಿಸಲು ಮುಂದಾದ ಮಾಜಿದಾ ಹಾಗು ಸ್ನೇಹಿತೆಯರು
►ರಮದಾನ್ ಕಿಟ್ ಮೂಲಕ ಹಣ ಸಂಗ್ರಹದ ಗುರಿ ►100 ರೂ. ರಮದಾನ್ ಕಿಟ್ ಗೆ ಐನೂರು, ಸಾವಿರ ರೂ. ನೀಡಿ ಖರೀದಿಸಿದ ಜನರು

PC ; asianet news
ಉಪವಾಸ ತೊರೆಯಲು ಸಿದ್ಧಪಡಿಸಿರುವ ಆಹಾರದ ಕಿಟ್ ಗಳನ್ನು ಮಾಜಿದಾ ಅವರಿಂದ ಖರೀದಿಸುವಾಗ,ಪ್ರತಿಯೊಬ್ಬರೂ ಮನತುಂಬಿ ಪ್ರಾಮಾಣಿಕವಾಗಿ ಮಾಡ್ತಾ ಇರೋ ಪ್ರಾರ್ಥನೆ ಒಂದೇ. ವಿನೀತಾ ಮತ್ತು ಸಜೀವ್ ಅವರ ಕುಟುಂಬವನ್ನು ಜಪ್ತಿಯಿಂದ ಮುಕ್ತಗೊಳಿಸಲು ಅಗತ್ಯವಿರುವ ಮೊತ್ತವನ್ನು ಸಂಗ್ರಹಿಸಲು ಈ ಮೂಲಕ ಸಾಧ್ಯವಾಗಲಿ ಎಂಬುದೇ ಆ ಪ್ರಾರ್ಥನೆ.
ಪ್ರೀತಿ, ಸಹಾನುಭೂತಿ, ಮಾನವೀಯತೆ ಮತ್ತು ಸೌಹಾರ್ದದ ನಿದರ್ಶನವಾಗಿ, ನಿಧಿ ಸಂಗ್ರಹಕ್ಕಾಗಿ ಮಾಜಿದಾ ಮತ್ತು ಅವರ ಸ್ನೇಹಿತರು ಸೇರಿ ರಮದಾನ್ ಕಿಟ್ ಪ್ಯಾಕೆಟ್ಗಳ ಬೆಲೆಯನ್ನು 100 ರೂ.ಗಳಿಗೆ ನಿಗದಿಪಡಿಸಿದ್ದರೂ, ಜನರು ಅವುಗಳನ್ನು ಇನ್ನೂ ಹೆಚ್ಚಿನ ಬೆಲೆಗೆ ಖರೀದಿಸಿದ್ದಕ್ಕೂ ಅದೇ ಕಾರಣವಿತ್ತು. ಅನೇಕ ಜನರು ಐನೂರು, ಸಾವಿರ ಮತ್ತು ಇನ್ನೂ ಹೆಚ್ಚಿನ ರೂಪಾಯಿಗಳನ್ನು ಪಾವತಿಸಿ ಈ ಚಾಲೆಂಜ್ ಅನ್ನು ಸ್ವೀಕರಿಸಿದರು.
ಹೌದು, ಕೇರಳದ ಮುಝಪ್ಪಿಲಂಗಾಡ್ ನಲ್ಲಿ ತಮ್ಮ ನೆರೆಯಲ್ಲಿ ವಾಸಿಸುವ ವಿನೀತಾ ಮತ್ತು ದಿವಂಗತ ಸಜೀವ್ ಅವರ ಮನೆಯನ್ನು ಬ್ಯಾಂಕ್ ನವರ ಜಪ್ತಿಯಿಂದ ರಕ್ಷಿಸಲು ಅಲ್ಲಿನ ಮುಸ್ಲಿಂ ಮಹಿಳೆಯರೆಲ್ಲರೂ ಸೇರಿಕೊಂಡು ರಮದಾನ್ ಕಿಟ್ ತಯಾರಿಸಿ, ಒಂದು ಚಾಲೆಂಜ್ ರೀತಿಯಲ್ಲಿ ಅದನ್ನು ಮಾರಿ ಅದರಿಂದ ಬರುವ ಹಣದಿಂದ ವಿನೀತ್ ಕುಟುಂಬಕ್ಕೆ ನೆರವಾಗುವ ಮಹತ್ವದ ಮಾನವೀಯ ಕೆಲಸಕ್ಕೆ ಮುಂದಾಗಿದ್ದು, ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಮಾಜಿದಾ ನೇತೃತ್ವದ ಕೆಟ್ಟಿನಗಂ ಲೇಡೀಸ್ ಯೂನಿಯನ್ (ಕೆಎಲ್ಯು) ಈ ರಮದಾನ್ ಕಿಟ್ ಸವಾಲನ್ನು ಸ್ವೀಕರಿಸಿದ ಮಹಿಳೆಯರ ತಂಡ. ಯಜಮಾನನ ಅಗಲಿಕೆಯಿಂದ ದುಃಖಿಸುತ್ತಿದ್ದ ಕುಟುಂಬಕ್ಕೆ ಸಾಧ್ಯವಾಗುವ ರೀತಿಯಲ್ಲಿ ಸಹಾಯ ಮಾಡುವ ಈ ತಂಡ ಕೆಲಸ ಮಾಡುತ್ತಿದೆ.
ವಿನೀತಾ ಅವರ ಬ್ಯಾಂಕ್ ಸಾಲದ ಮೊತ್ತ 16 ಲಕ್ಷ ರೂ.ಗಳನ್ನು ಸಂಗ್ರಹಿಸಲು ಕೆಎಲ್ಯು ನೋಟಿಸ್ಗಳನ್ನು ಮುದ್ರಿಸಿ ಹಂಚಿತ್ತು. ಈ ಚಾಲೆಂಜ್ ಅನ್ನು ಸ್ವೀಕರಿಸಿ ನೆರವಾಗುವಂತೆ ಜನರಲ್ಲಿ ಮನವಿ ಮಾಡಿತ್ತು.ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಜನರು ಈ ಸವಾಲಿನಲ್ಲಿ ಭಾಗವಹಿಸಿ ಕಿಟ್ ಗಳನ್ನು ಕಾಯ್ದಿರಿಸಿದರು. ರಮದಾನ್ ಕಿಟ್ ಚಾಲೆಂಜ್ ಮೂಲಕ ಈಗಾಗಲೇ ನಾಲ್ಕು ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣವನ್ನು ಸಂಗ್ರಹಿಸಲಾಗಿದೆ. ಇನ್ನೂ ಏಳು ಲಕ್ಷ ರೂಪಾಯಿ ಸಂಗ್ರಹವಾಗಬೇಕಿದೆ.
ಇದೀಗ ಮಾಜಿದಾ ಮತ್ತು ತಂಡ, ಸ್ನೇಹಿತರು ಮತ್ತು ಸಂಬಂಧಿಕರ ಮೂಲಕ ಅದನ್ನು ಸಂಗ್ರಹಿಸಲು ನಿರ್ಧರಿಸಿದೆ. ಸಾಲದ ಮೊತ್ತವನ್ನು ಮಾರ್ಚ್ 31 ರಂದು ಬ್ಯಾಂಕಿಗೆ ಪಾವತಿಸಬೇಕು. ಮಹಿಳೆಯರೆಲ್ಲರೂ ಮನವಿ ಮಾಡಿದ್ದರಿಂದ ಬ್ಯಾಂಕ್ ಈಗಾಗಲೇ ಬಡ್ಡಿ ಮೊತ್ತವನ್ನು ಮನ್ನಾ ಮಾಡಿದೆ.
ಕೆಎಲ್ಯು ಸದಸ್ಯರು ತಮ್ಮ ತಮ್ಮ ಮನೆಗಳಿಂದ ತಯಾರಿಸಿದ ಆಹಾರಗಳನ್ನು ಮಾಜಿದಾ ಅವರ ಮನೆಗೆ ತಲುಪಿಸಿದರು. ಉನ್ನಕ್ಕಾಯ, ರೊಟ್ಟಿ, ಕೇಕ್ ಮತ್ತು ಖರ್ಜೂರದಂತಹ ಆಹಾರ ಪದಾರ್ಥಗಳನ್ನು ಪ್ಯಾಕೆಟ್ಗಳಲ್ಲಿ ವಿತರಿಸಲಾಯಿತು. ಬುಕ್ ಮಾಡಿದವರಲ್ಲಿ ಹಲವರು ಮನೆಗೆ ಬಂದು ಅದನ್ನು ಖರೀದಿಸಿದರು. ಉಳಿದವರ ಮನೆಗಳಿಗೆ ತಲುಪಿಸಲಾಯಿತು. ಪಿ.ಕೆ. ಮಾಜಿದಾ ಅವರಲ್ಲದೆ, ರೆಹ್ನಾ ಹಾಶಿಮ್, ಶರೀನ್ ಫಾಜಿಸ್ ಮತ್ತು ರಜುಲಾ ಕರೀಮ್ ಈ ತಂಡದಲ್ಲಿ ಸಾಥ್ ನೀಡುತ್ತಿದ್ದಾರೆ.
ಜನರ ಸಹಾಯ, ಸಹಕಾರದ ನಿರೀಕ್ಷೆಯಲ್ಲಿದೆ ಕೆಟ್ಟಿನಗಂ ಲೇಡೀಸ್ ಯೂನಿಯನ್. ವಿನೀತಾ ಅವರ ಕುಟುಂಬಕ್ಕೆ ನಿಧಿ ಸಂಗ್ರಹಿಸಲು ಕೇರಳ ಗ್ರಾಮೀಣ ಬ್ಯಾಂಕಿನ ಎಡಕ್ಕಾಡ್ ಶಾಖೆಯಲ್ಲಿ ಖಾತೆಯನ್ನು ತೆರೆಯಲಾಗಿದೆ.
ಖಾತೆ ಸಂಖ್ಯೆ: 40502101045842, IFSC KLGB0040502 ದೂರವಾಣಿ: 9633889977