ಸುಧೀರ್ಘ ಕಾನೂನು ಹೋರಾಟದಲ್ಲಿ ವಿಶೇಷ ಕುಟುಂಬ ಪಿಂಚಣಿ ಗೆದ್ದ ಮೇಜರ್ ಪತ್ನಿ
Photo: freepik
ಚಂಡೀಗಢ: ಹೈಪರ್ ಟೆನ್ಷನ್ ನಿಂದಾಗಿ ಮೆದುಳು ಸ್ರಾವದಿಂದ ಬಾತ್ರೂಂ ನಲ್ಲಿ ಬಿದ್ದು 23 ವರ್ಷಗಳ ಹಿಂದೆ ಮೃತಪಟ್ಟ ಸೇನೆಯ ಮೇಜರ್ ಒಬ್ಬರ ಕುಟುಂಬಕ್ಕೆ ವಿಶೇಷ ಕುಟುಂಬ ಪಿಂಚಣಿ ಮಂಜೂರು ಮಾಡುವಂತೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶ ನೀಡಿದೆ. ಮೇಜರ್ ಪತ್ನಿ ನಡೆಸಿದ 23 ವರ್ಷಗಳ ಕಾನೂನು ಹೋರಾಟಕ್ಕೆ ಜಯ ಸಂದಿದ್ದು, ಈ ಪಿಂಚಣಿ ನೀಡಿಕೆ ನಿರಾಕರಿಸುವ ಉದ್ದೇಶದಿಂದ ಯಾವುದೇ ಯಾಂತ್ರಿಕ ಅಥವಾ ಅತಿ ತಾಂತ್ರಿಕ ವಿಧಾನವನ್ನು ಅನುಸರಿಸಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದೆ.
ಇಂಥ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರಗಳು ಮಾನವೀಯ ದೃಷ್ಟಿಕೋನವನ್ನು ಹೊಂದುವುದು ಅಗತ್ಯವೇ ಹೊರತು ಪ್ರಕರಣವನ್ನು ಯಾಂತ್ರಿಕವಾಗಿ ವಿಲೇವಾಲಿ ಮಾಡಬಾರದು ಎನ್ನುವುದು ನಮ್ಮ ಅಭಿಮತ. ಸೇನೆಯ ಸೇವೆಯಲ್ಲಿ ತಮ್ಮ ಜೀವನದ ಬಹುತೇಕ ಭಾಗವನ್ನು ಕಳೆದಿರುವ ವ್ಯಕ್ತಿಯ ಕುಟುಂಬಕ್ಕೆ ತಾಂತ್ರಿಕ ಅಥವಾ ಯಾಂತ್ರಿಕ ಕಾರಣದಿಂದ ಪ್ರಯೋಜನವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಗುರುವಾರ ನೀಡಿದ ತೀರ್ಪಿನಲ್ಲಿ ಎಎಫ್ಟಿ ಸ್ಪಷ್ಟಪಡಿಸಿದೆ.
ಎಎಫ್ಟಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರ ಮೆನನ್, ಆಡಳಿತಾತ್ಮಕ ಸದಸ್ಯ ಲೆಫ್ಟಿನೆಂಟ್ ಜನರಲ್ ಸಿಪಿ ಮೊಹಾಂತಿ ಅವರನ್ನೊಳಗೊಂಡ ಪ್ರಧಾನ ಪೀಠ ಈ ಆದೇಶ ಹೊರಡಿಸಿ, ಮೃತ ಮೇಜರ್ ಸಂಜೀವ್ ಛಡ್ಡಾ ಅವರ ಪತ್ನಿ ಬಿಂಧು ಛಡ್ಡಾ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದೆ.
ಅರ್ಜಿದಾರರ ಪತಿ 1988ರ ಜೂನ್ನಲ್ಲಿ ಭಾರತೀಯ ಸೇನೆಯನ್ನು ಸೇರಿದ್ದು, 2000ನೇ ಇಸ್ವಿ ಸೆಪ್ಟೆಂಬರ್ 3ರಂದು ಮೃತಪಟ್ಟಿದ್ದರು. ನವದೆಹಲಿಯಲ್ಲಿರುವ ಕೇಂದ್ರ ಕಚೇರಿಯ ಇಎಂಇ (ತಾಂತ್ರಿಕ ಗುಂಪು) ಗೆ ನಿಯೋಜನೆಯಾಗಿದ್ದ ಅವಧಿಯಲ್ಲಿ 'ಇಂಟ್ರಾ ಸೆರೆಬ್ರಲ್ ಹ್ಯಾಮರೇಜ್'ನಿಂದ ಇವರು ಮೃತಪಟ್ಟಿದ್ದರು. ಸಾವು ಆಪಾದನೀಯ ಅಥವಾ ಸೇವೆಯಿಂದ ಹದಗೆಟ್ಟ ಕಾರಣದಿಂದ ಸಂಭವಿಸಿಲ್ಲ ಎಂಬ ಕಾರಣ ನೀಡಿ ಸಕ್ಷಮ ಪ್ರಾಧಿಕಾರ ಇವರ ಪತ್ನಿಗೆ ಪಿಂಚಣಿ ನಿರಾಕರಿಸಿತ್ತು.