ಬಿಜೆಪಿ ನಾಯಕರಿಗೆ ಪ್ರಾಧಾನ್ಯತೆ ನೀಡಿದ್ದರಿಂದ 'ಇನ್ವೆಸ್ಟ್ ಕರ್ನಾಟಕ 2025' ಹೂಡಿಕೆ ಸಮಾವೇಶಕ್ಕೆ ಖರ್ಗೆ, ರಾಹುಲ್ ಗೈರು?
ಸ್ಪಷ್ಟನೆ ನೀಡಿದ ಕಾಂಗ್ರೆಸ್

Photo credit: PTI
ಬೆಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ 'ಇನ್ವೆಸ್ಟ್ ಕರ್ನಾಟಕ 2025' ಹೂಡಿಕೆ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಆಹ್ವಾನವನ್ನು ನೀಡಲಾಗಿತ್ತು. ಆದರೆ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲಿರುವ ಹಿನ್ನೆಲೆ ಈ ಇಬ್ಬರು ನಾಯಕರು ಕಾರ್ಯಕ್ರಮಕ್ಕೆ ಗೈರು ಹಾಜರಾಗಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ತಿಳಿಸಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ರಾಜ್ಯ ಸರ್ಕಾರವೇ ಆಯೋಜಿಸುವ 'ಇನ್ವೆಸ್ಟ್ ಕರ್ನಾಟಕ 2025' ಹೂಡಿಕೆ ಸಮಾವೇಶದಲ್ಲಿ ಕೇಂದ್ರ ಸಚಿವರಿಗೆ ಮತ್ತು ಬಿಜೆಪಿ ನಾಯಕರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವುದರಿಂದ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲೂ ಕೇಂದ್ರ ಸಚಿವರ ಕೆಳಗಡೆ ಖರ್ಗೆ ಹಾಗೂ ರಾಹುಲ್ ಹೆಸರನ್ನು ನಮೂದಿಸಿರುವುದು ಕಾಂಗ್ರೆಸ್ ನಾಯಕತ್ವವನ್ನು ಕೆರಳಿಸಿದೆ. ಇದರಿಂದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಗೈರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.
ಕಾಂಗ್ರೆಸ್ ನಿಂದ ಸ್ಪಷ್ಟನೆ:
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಭಾಗವಹಿಸುವುದರಿಂದ ಅವರಿಗೆ ‘ಇನ್ ವೆಸ್ಟ್ ಕರ್ನಾಟಕ’ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ತಿಳಿಸಿದ್ದಾರೆ.
ಜೈರಾಮ್ ರಮೇಶ್ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು,ʼರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸುತ್ತಿದ್ದು, ಅವರಿಗೆ ಬೆಂಗಳೂರಿನಲ್ಲಿ ನಡೆಯುವ ‘ಇನ್ ವೆಸ್ಟ್ ಕರ್ನಾಟಕ’ ಹೂಡಿಕೆ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಅವರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಅವರು ಸಮಾವೇಶಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
'ಇನ್ವೆಸ್ಟ್ ಕರ್ನಾಟಕ 2025' ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸಮಾವೇಶವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಂಗಳವಾರ ಸಂಜೆ 4ಕ್ಕೆ ಉದ್ಘಾಟಿಸಲಿದ್ದಾರೆ. ಈ ವೇಳೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ಕೆಲ ಕೇಂದ್ರ ಸಚಿವರು ಮತ್ತು ಕೈಗಾರಿಕೋದ್ಯಮಿಗಳು, ಜಾಗತಿಕ ಹೂಡಿಕೆದಾರರು ಭಾಗವಹಿಸಲಿದ್ದಾರೆ.