ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ಯುವಜನರ ವಿದ್ಯಾರ್ಥಿ ವೇತನವನ್ನು ಬಿಜೆಪಿ ಕಸಿದಿದೆ: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ (PTI)
ಹೊಸದಿಲ್ಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಯುವಜನರ ವಿದ್ಯಾರ್ಥಿ ವೇತನವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಸಿದುಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
ಕೇಂದ್ರ ಸರಕಾರದ ಘೋಷಣೆಯಾಗಿರುವ ‘‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’ ದುರ್ಬಲ ವರ್ಗಗಳ ಯುವ ಜನರ ಆಕಾಂಕ್ಷೆಗಳನ್ನು ಅಣಕಿಸಿದೆ ಎಂದು ಅವರು ಹೇಳಿದ್ದಾರೆ.
ದೇಶದ ದುರ್ಬಲ ವರ್ಗದ ವಿದ್ಯಾರ್ಥಿಗಳು ಅವಕಾಶಗಳನ್ನು ಪಡೆಯದೆ ಹಾಗೂ ಅವರ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡದೆ, ಯುವ ಜನರಿಗೆ ನಾವು ಹೇಗೆ ಉದ್ಯೋಗಾವಕಾಶವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಎಲ್ಲಾ ವಿದ್ಯಾರ್ಥಿ ವೇತನಗಳ ಫಲಾನುಭವಿಗಳ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿರುವುದು ಮಾತ್ರವಲ್ಲದೆ, ವರ್ಷದಿಂದ ವರ್ಷಕ್ಕೆ ಶೇ. 25ರಷ್ಟು ಕಡಿಮೆ ಹಣವನ್ನು ಖರ್ಚು ಮಾಡಿದೆ ಎಂಬುದನ್ನು ಸರಕಾರದ ಅಂಕಿ-ಅಂಶ ತೋರಿಸುತ್ತಿದೆ ಎಂದು ಖರ್ಗೆ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.