ಅವಕಾಶ ನೀಡಿದರೆ ಇಂಡಿಯಾ ಮೈತ್ರಿಕೂಟ ಮುನ್ನಡೆಸಲು ಸಿದ್ಧ : ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ | PC : PTI
ಕೋಲ್ಕತಾ : ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಕಾರ್ಯವೈಖರಿಯ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು,ಅವಕಾಶ ನೀಡಿದರೆ ಮೈತ್ರಿಕೂಟವನ್ನು ಮುನ್ನಡೆಸಲು ತಾನು ಸಿದ್ಧ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಜವಾಬ್ದಾರಿಯ ಜೊತೆಗೆ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನೂ ತಾನು ನಿಭಾಯಿಸಬಲ್ಲೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬ್ಯಾನರ್ಜಿ ಹೇಳಿದ್ದಾರೆ.
‘ನಾನು ಇಂಡಿಯಾ ಮೈತ್ರಿಕೂಟವನ್ನು ರಚಿಸಿದ್ದೆ. ಈಗ ಅದನ್ನು ನಿರ್ವಹಿಸುವುದು ಅದನ್ನು ನಡೆಸುತ್ತಿರುವವರಿಗೆ ಬಿಟ್ಟಿದ್ದು. ಅವರಿಗೆ ಅದನ್ನು ಸರಿಯಾಗಿ ನಿರ್ವಹಿಸಲಾಗದಿದ್ದರೆ ನಾನೇನು ಮಾಡಬಲ್ಲೆ? ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದುಕೊಳ್ಳುವ ಅಗತ್ಯವಿದೆ ಎಂದಷ್ಟೇ ನಾನು ಹೇಳಬಲ್ಲೆ ’ ಎಂದಿದ್ದಾರೆ.
ಪ್ರಬಲ ಬಿಜೆಪಿ ವಿರೋಧಿ ಶಕ್ತಿಯಾಗಿರುವ ನೀವೇಕೆ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಬಾರದು ಎಂಬ ಪ್ರಶ್ನೆಗೆ ಬ್ಯಾನರ್ಜಿ, ‘ಅವಕಾಶ ನೀಡಿದರೆ ಅದು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ನಾನು ನೋಡಿಕೊಳ್ಳುತ್ತೇನೆ. ನಾನು ಪಶ್ಚಿಮ ಬಂಗಾಳದಿಂದ ಹೊರಕ್ಕೆ ಹೋಗಲು ಬಯಸುವುದಿಲ್ಲ,ಆದರೆ ಇಲ್ಲಿಂದಲೇ ಅದನ್ನು ಮುನ್ನಡೆಸಬಲ್ಲೆ’ ಎಂದು ಉತ್ತರಿಸಿದ್ದಾರೆ.
ಬಿಜೆಪಿಯನ್ನು ಎದುರಿಸಲು ರೂಪುಗೊಂಡಿರುವ ಇಂಡಿಯಾ ಮೈತ್ರಿಕೂಟವು ಎರಡು ಡಝನ್ಗಳಿಗೂ ಅಧಿಕ ಪ್ರತಿಪಕ್ಷಗಳನ್ನು ಒಳಗೊಂಡಿದೆ. ಆದರೆ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸಮನ್ವಯದ ಕೊರತೆಯಿಂದಾಗಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.
ತಮ್ಮ ಅಹಂ ಅನ್ನು ಬದಿಗಿರಿಸುವಂತೆ ಮತ್ತು ಬ್ಯಾನರ್ಜಿಯವರನ್ನು ಪ್ರತಿಪಕ್ಷ ಮೈತ್ರಿಕೂಟದ ನಾಯಕಿಯನ್ನಾಗಿಸುವಂತೆ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಕಾಂಗ್ರೆಸ್ ಮತ್ತು ಇಂಡಿಯಾದ ಇತರ ಪಕ್ಷಗಳಿಗೆ ಕರೆ ನೀಡಿದ ಬಳಿಕ ದೀದಿಯ ಈ ಹೇಳಿಕೆ ಹೊರಬಿದ್ದಿದೆ.
ಕಾಂಗ್ರೆಸ್ ಇಂಡಿಯಾ ಬಣದಲ್ಲಿಯ ದೊಡ್ಡ ಪಕ್ಷವಾಗಿರುವುದರಿಂದ ಸಹಜವಾಗಿಯೇ ಅದನ್ನು ಮೈತ್ರಿಕೂಟದ ನಾಯಕನನ್ನಾಗಿ ಪರಿಗಣಿಸಲಾಗಿದೆ.