ಗುಜರಾತ್: ಪ್ರವಾಹದ ನಂತರ ಶಾಸಕಿಗೆ ತರಾಟೆಯ ಭರದಲ್ಲಿ ಅಸಭ್ಯ ಸನ್ನೆಮಾಡಿದ್ದ ವ್ಯಕ್ತಿಯ ಬಂಧನ
PC : indianexpress/ಕುಲದೀಪ ಭಟ್
ವಡೋದರಾ(ಗುಜರಾತ್): ವಡೋದರಾದಲ್ಲಿ ಭಾರೀ ಹಾವಳಿಯನ್ನುಂಟು ಮಾಡಿದ್ದ ಪ್ರವಾಹದ ಕುರಿತು ಬಿಜೆಪಿ ನಾಯಕರನ್ನು ತರಾಟೆಗೆತ್ತಿಕೊಳ್ಳುವ ಭರದಲ್ಲಿ ಶಾಸಕಿ ಮನಿಷಾ ವಕೀಲ ಅವರತ್ತ ಅಸಭ್ಯ ಸನ್ನೆಯನ್ನು ಮಾಡಿದ್ದ ನಗರದ ಕರೇಲಿಬಾಗ್ ನಿವಾಸಿ ಕುಲದೀಪ ಭಟ್(45) ಅವರನ್ನು ಕ್ರಿಮಿನಲ್ ಬೆದರಿಕೆ ಮತ್ತು ಮಹಿಳೆಯ ಘನತೆಗೆ ಚ್ಯುತಿಯನ್ನುಂಟು ಮಾಡಿದ ಆರೋಪದಲ್ಲಿ ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ವಡೋದರಾದಲ್ಲಿ ಪ್ರವಾಹ ಇಳಿಮುಖಗೊಂಡ ಒಂದು ದಿನದ ಬಳಿಕ ಆ.30ರಂದು ಕರೇಲಿಬಾಗ್ ನಿವಾಸಿಗಳು ನೆರೆ ಸಂದರ್ಭದಲ್ಲಿ ಜನರಿಗೆ ನೆರವಾಗಲಿಲ್ಲ ಎಂದು ಆರೋಪಿಸಿ ಸ್ಥಳೀಯ ಸುದ್ದಿವಾಹಿನಿ ಸ್ಪಾರ್ಕ್ ನ್ಯೂಸ್ ಬಳಿ ಜಿಲ್ಲಾಡಳಿತ ಮತ್ತು ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಭಟ್, ‘ಬಿಜೆಪಿಯವರು ಯಾವುದೇ ಹುದ್ದೆಯಲ್ಲಿರಲಿ, ಒಬ್ಬರೂ ಉಪಯೋಗವಿಲ್ಲ. ಬಿಜೆಪಿ ನಾಯಕರು ಈ ಪ್ರದೇಶಕ್ಕೆ ಕಾಲಿಡುವ ಧೈರ್ಯ ಮಾಡಬಾರದು, ಬಂದರೆ ಅವರ ಕಾಲು ಮುರಿದು ಅವರನ್ನು ನಿರುದ್ಯೋಗಿಗಳನ್ನಾಗಿಸುತ್ತೇವೆ’ ಎಂದು ಗುಡುಗಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ‘ಮನಿಷಾಬೆನ್ಗೆ ಹೇಳಿ, ನಾವು ಅವರ ಮನೆಗೆ ನುಗ್ಗುತೇವೆ ಮತ್ತು (ಅಸಭ್ಯ ಸನ್ನೆಯನ್ನು ಮಾಡುತ್ತ)...ಇಲ್ಲಿಗೆ ಕಾಲಿಡಬೇಡಿ ’ ಎಂದೂ ಭಟ್ ಹೇಳಿದ್ದರು. ಪ್ರವಾಹ ಪೀಡಿತ ವಿವಿಧ ಬಡಾವಣೆಗಳ ಜನರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿ, ತಮ್ಮಲ್ಲಿಗೆ ಬಂದಿದ್ದ ಬಿಜೆಪಿ ನಾಯಕರನ್ನು ವಾಪಸ್ ಕಳುಹಿಸಿದ್ದರಾದರೂ ಭಟ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗಿದೆ.
ಪ್ರದೇಶದ ಅಪರಿಚಿತ ವ್ಯಕ್ತಿಯೋರ್ವನ ದೂರಿನ ಮೇರೆಗೆ ಭಟ್ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ ಮನಿಷಾ ವಕೀಲ, ‘ಜನರ ನೋವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ, ಆದರೆ ದೂರುಗಳು ಸಭ್ಯತೆಯ ಗೆರೆಯನ್ನು ದಾಟಬಾರದು. ನಾನು ಹಲವಾರು ಸ್ಥಳಗಳಿಗೆ ತೆರಳಿ ಜನರನ್ನು ಭೇಟಿಯಾಗಿದ್ದೆ. ಆದರೆ ಕೆಲವು ಪ್ರದೇಶಗಳು ತುಂಬ ಜಲಾವೃತಗೊಂಡಿದ್ದವು, ಹೀಗಾಗಿ ನಮಗೆ ತಕ್ಷಣವೇ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ರಾಜಕೀಯ ನಾಯಕರಾಗಿ ನಾವು ಹಲವಾರು ರೀತಿಯ ಜನರನ್ನು ನೋಡುತ್ತಿರುತ್ತೇವೆ. ಅವರು ನಮ್ಮ ಮತದಾರರು ಮತ್ತು ನಮ್ಮನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ ಎನ್ನುವುದು ನಮಗೆ ತಿಳಿದಿದೆ. ಹೀಗಾಗಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸಲು ಅವರಿಗೂ ಹಕ್ಕು ಇದೆ. ನನಗೇನೂ ಬೇಸರವಿಲ್ಲ, ಏಕೆಂದರೆ ಜನರು ನಷ್ಟವನ್ನು ಅನುಭವಿಸಿದ್ದಾರೆ. ಆದರೆ ಆ ವ್ಯಕ್ತಿಯು ಮಾಡಿದ್ದ ಅಸಭ್ಯ ಸನ್ನೆಯನ್ನು ತಪ್ಪಿಸಬಹುದಿತ್ತು’ ಎಂದು ಹೇಳಿದರು.