ಬಾವಿಗೆ ಇಳಿದ ತಂದೆ, ಇಬ್ಬರು ಪುತ್ರರ ಸಹಿತ ಐವರು ವಿಷಪೂರಿತ ಅನಿಲ ಸೇವಿಸಿ ಮೃತ್ಯು
Photo: X/@gujratsamachar
ಜಾಂಗೀರ್-ಚಂಪಾ: ಬಾವಿಯೊಳಗೆ ಸಂಶಯಾಸ್ಪದ ವಿಷಪೂರಿತ ಅನಿಲ ಸೇವಿಸಿ ತಂದೆ, ಇಬ್ಬರು ಪುತ್ರರ ಸಹಿತ ಐವರು ಮೃತಪಟ್ಟಿರುವ ಘಟನೆ ಚಂಡೀಗಢದ ಜಾಂಗೀರ್-ಚಂಪಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ ಬಿರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಕಿರ್ದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರಾಮಚಂದ್ರ ಜೈಸ್ವಾಲ್ (60), ರಮೇಶ್ ಪಟೇಲ್ (50), ರಮೇಶ್ ಅವರ ಪುತ್ರರಾದ ರಾಜೇಂದ್ರ ಪಟೇಲ್(20), ಜಿತೇಂದ್ರ ಪಟೇಲ್ (25) ಹಾಗೂ ಟಿಕೇಶ್ವರ್ ಚಂದ್ರ ಮೃತಪಟ್ಟವರು ಎಂದು ಗುರುತಿಸಲಾಗಿದೆ ಎಂದು ಬಿಲಾಸ್ಪುರ್ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂಜೀವ್ ಶುಕ್ಲಾ ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಬಾವಿಯೊಳಗೆ ಬಿದ್ದ ಮರದ ತುಂಡೊಂದನ್ನು ಎತ್ತಿಕೊಳ್ಳಲು ಜೈಸ್ವಾಲ್ ಬಾವಿಗೆ ಇಳಿದಿದ್ದಾರೆ. ಅಲ್ಲಿ ಅವರು ಅಲ್ಲಿ ಅಸ್ವಸ್ಥರಾಗಿದ್ದು, ಈ ವೇಳೆ ಅವರ ಕುಟುಂಬದ ಸದಸ್ಯನೊಬ್ಬ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಈ ಕೂಗಾಟವನ್ನು ಕೇಳಿದ ಪಟೇಲ್ ಕುಟುಂಬದ ಮೂವರು ಬಾವಿಯೊಳಗೆ ಇಳಿದಿದ್ದಾರೆ ಎಂದು ಅವರು ಶುಕ್ಲಾ ಹೇಳಿದ್ದಾರೆ.
ಬಾವಿಗೆ ಇಳಿದ ಆ ನಾಲ್ವರೂ ಮೇಲೆ ಬಾರದೆ ಹೋದಾಗ, ಸ್ವತಃ ಚಂದ್ರ ಎಂಬವರೂ ಬಾವಿಯೊಳಗೆ ಇಳಿದಿದ್ದಾರೆ. ಆದರೆ, ಅವರೂ ಕೂಡಾ ಪ್ರಜ್ಞಾಹೀನರಾಗಿದ್ದಾರೆ. ಈ ಘಟನೆಯನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಅವರು ತಿಳಿಸಿದ್ದಾರೆ.
ಬಾವಿಯೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತರಲು ರಾಜ್ಯ ವಿಪತ್ತು ನಿರ್ವಹಣಾ ತಂಡದ ನೆರವು ಪಡೆಯಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
"ಮೇಲ್ನೋಟಕ್ಕೆ ಬಾವಿಯೊಳಗೆ ಯಾವುದೋ ವಿಷಪೂರಿತ ಅನಿಲ ಸೇವಿಸಿ ಅವರೆಲ್ಲ ಮೃತಪಟ್ಟಿರುವಂತಿದೆ" ಎಂದು ಶುಕ್ಲಾ ಹೇಳಿದ್ದಾರೆ.