ಮಣಿಪುರ: ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣದ 7ನೇ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ Photo: Twitter
ಇಂಫಾಲ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ಆದ ಮಣಿಪುರದಲ್ಲಿ ಗುಂಪೊಂದು ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ಘಟನೆಯ ವೀಡಿಯೊಗೆ ಸಂಬಂಧಿಸಿ 7ನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಥೌಬಾಲ್ ಜಿಲ್ಲೆಯಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಘಟನೆಯ ವೀಡಿಯೊ ಕುರಿತಂತೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಇಬ್ಬರು ಮಹಿಳೆಯರ ಮೇಲೆ ಹೊಲದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಕೂಡ ಮಣಿಪುರದ ಬುಡಕಟ್ಟು ಸಂಘಟನೆಯೊಂದು ಆರೋಪಿಸಿತ್ತು.
ಈ ಘಟನೆ ಇಂಫಾಲದಿಂದ 35 ಕಿ.ಮೀ. ದೂರದಲ್ಲಿರುವ ಕಂಗ್ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ನಡೆದಿದೆ ಎಂದು ಇಂಡಿಜೀನಿಯಸ್ ಟ್ರೈಬಲ್ ಲೀಡರ್ಸ್ ಫಾರಂ (ITLF) ಆರೋಪಿಸಿತ್ತು. ಆದರೆ, ಕಂಗ್ಪೊಕ್ಪಿಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿದ ಹೊರತಾಗಿಯೂ ಪೊಲೀಸರು ಈ ಘಟನೆ ಬೇರೆ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಿದ್ದರು.
26 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆದ ಒಂದು ದಿನದ ಬಳಿಕ ಜುಲೈ 20ರಂದು ಪೊಲೀಸರು ಮೊದಲ ಬಂಧನ ನಡೆಸಿದ್ದರು. ಅನಂತರ ಮತ್ತೆ ಹಲವರನ್ನು ಬಂಧಿಸಿದ್ದರು.