ಮಣಿಪುರಕ್ಕೆ ಸಹಾಯ ಮಾಡಲು ನಮಗೆ ನೆರವಾಗಿ: ಪ್ರತಿಭಟನಾಕಾರರಿಗೆ ಮನವಿ ಮಾಡಿದ ಸೇನೆ
ಮಹಿಳಾ ಹೋರಾಟಗಾರರಿಂದ ಉದ್ದೇಶಪೂರ್ವಕವಾಗಿ ರಸ್ತೆಗಳಿಗೆ ತಡೆ; ಸೇನೆಯ ಆರೋಪ
Photo: ANI
ಹೊಸದಿಲ್ಲಿ: ಹಿಂಸಾಪೀಡಿತ ಮಣಿಪುರದಲ್ಲಿ ಶಾಂತಿ ಹಾಗೂ ಸಹಜತೆ ಮರಳಲು ನಡೆಸಲಾಗುತ್ತಿರುವ ಯತ್ನಗಳಿಗೆ ಜನರ ಸಹಕಾರವನ್ನು ಭಾರತೀಯ ಸೇನೆ ಕೋರಿದೆ.
ಮಹಿಳಾ ಹೋರಾಟಗಾರರು ಉದ್ದೇಶಪೂರ್ವಕವಾಗಿ ರಸ್ತೆಗಳಿಗೆ ಅಡ್ಡಿಯುಂಟು ಮಾಡಿ ಭದ್ರತಾ ಪಡೆಗಳ ಕಾರ್ಯಾಚರಣೆಗೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಸೇನೆ ಸೋಮವಾರ ಸಂಜೆ ಹೇಳಿದೆ.
ಕಳೆದ ವಾರ ಮಣಿಪುರದ ಇಥಮ್ ಗ್ರಾಮದಲ್ಲಿ 1200 ಮಂದಿ ಮಹಿಳೆಯರ ಗುಂಪಿನಿಂದ ಆವೃತವಾದ ಸೇನೆ ನಾಗರಿಕರ ಜೀವಗಳನ್ನು ರಕ್ಷಿಸಲು 12 ತೀವ್ರಗಾಮಿಗಳನ್ನು ಬಿಡುಗಡೆಗೊಳಿಸಿದ ಘಟನೆಯ ಸಹಿತ ಹಲವು ಇತರ ಘಟನೆಗಳನ್ನು ವಿವರಿಸಿ ಸೇನೆ ವೀಡಿಯೋವೊಂದನ್ನು ಶೇರ್ ಮಾಡಿದೆ.
“ಮಣಿಪುರದಲ್ಲಿ ಮಹಿಳಾ ಹೋರಾಟಗಾರರು ಉದ್ದೇಶಪೂರ್ವಕವಾಗಿ ರಸ್ತೆಗಳಲ್ಲಿ ಅಡ್ಡಿಯುಂಟುಮಾಡುತ್ತಿದ್ದಾರೆ. ಈ ರೀತಿಯ ಹಸ್ತಕ್ಷೇಪವು ಗಂಭೀರ ಪರಿಸ್ಥಿತಿಯಲ್ಲಿ ಆಸ್ತಿಪಾಸ್ತಿ, ಜೀವವುಳಿಸುವ ಕಾರ್ಯಾಚರಣೆಗೆ ತೊಡಕುಂಟಾಗುತ್ತದೆ, ಎಲ್ಲಾ ಜನರು ನಮ್ಮ ಪ್ರಯತ್ನಗಳನ್ನು ಬೆಂಬಲಿಸಬೇಕು,” ಎಂದು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ಟ್ವೀಟ್ ಮೂಲಕ ಹೇಳಿದೆ.
ಭಾರತೀಯ ಸೇನೆಯ ಇಥಮ್ ಗ್ರಾಮದಲ್ಲಿನ ಕಾರ್ಯಾಚರಣೆಗಳ ಕಮಾಂಡರ್ ಇನ್-ಚಾರ್ಜ್ ಅವರು ಪ್ರಬುದ್ಧ ನಿರ್ಧಾರ ಕೈಗೊಂಡು ಸೇನೆಯ ಮಾನವೀಯ ಮುಖ ತೋರಿಸಿದ್ದನ್ನು ಸೇನೆ ಈ ಹಿಂದೆ ಶ್ಲಾಘಿಸಿತ್ತು.
“ಪ್ರಕರಣದ ಸೂಕ್ಷ್ಮತೆ ಹಾಗೂ ದೊಡ್ಡ ಸಂಖ್ಯೆಯ ಮಹಿಳೆಯರಿದ್ದ ಗುಂಪಿನಿಂದಾಗಿ ಎಲ್ಲಾ 12 ಮಂದಿಯನ್ನು ಸ್ಥಳೀಯ ನಾಯಕನಿಗೆ ಹಸ್ತಾಂತರಿಸುವ ಎಚ್ಚರಿಕೆಯ ನಿರ್ಧಾರ ಕೈಗೊಳ್ಳಲಾಗಿತ್ತು,” ಎಂದು ಸೇನೆ ಹೇಳಿತ್ತು.
ಸೇನೆ ಮತ್ತು ಮಹಿಳೆಯರ ನೇತೃತ್ವದ ಗುಂಪುಗಳ ನಡುವಿನ ಈ ಸಮಸ್ಯೆ ಶನಿವಾರವಿಡೀ ಮುಂದುವರಿದಿತ್ತು.
ಬಿಡುಗಡೆಗೊಂಡ 12 ಮಂದಿ ತೀವ್ರಗಾಮಿ ಗುಂಪು ಕಂಗ್ಲೇ ಯಾವೊಲ್ ಕನ್ನಾ ಲುಪ್ ಇದರ ಸದಸ್ಯರಾಗಿದ್ದು, 2015ರಲ್ಲಿ 6 ಡೋಗ್ರಾ ಘಟಕ ಮೇಲಿನ ದಾಳಿ ಸಹಿತ ಹಲವು ದಾಳಿಗಳಲ್ಲಿ ಈ ಗುಂಪು ಶಾಮೀಲಾಗಿತ್ತು ಎಂದು ಸೇನೆ ಹೇಳಿದೆ.