ಮಣಿಪುರ: ರವಿವಾರದಂದು ಪಶ್ಚಿಮ ಇಂಫಾಲದಲ್ಲಿ ಸಡಿಲಗೊಂಡ ನಿರ್ಬಂಧ
ಫೋಟೋ- PTI
ಇಂಫಾಲ: ಹಿಂಸಾಚಾರ ಪೀಡಿತವಾಗಿದ್ದ ಪಶ್ಚಿಮ ಮಣಿಪುರ ಭಾಗದಲ್ಲಿ ಅಪರಾಧ ದಂಡ ಸಂಹಿತೆಯ ಸೆಕ್ಷನ್ 144ರ ಅಡಿ ಹೇರಲಾಗಿದ್ದ ಪ್ರತಿಬಂಧಕಾಜ್ಞೆಯನ್ನು ರವಿವಾರ ಸಡಿಲಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಗಲಭೆ ಭುಗಿಲೆದ್ದಿದ್ದರಿಂದ ಮೇ 3ರಿಂದ ವ್ಯಕ್ತಿಗಳ ಚಲನವಲನಗಳ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು ಎಂದು ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಜಾನ್ಸನ್ ಮೀಟೀ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.
"ಪಶ್ಚಿಮ ಮಣಿಪುರ ಭಾಗದ ಎಲ್ಲ ಪ್ರದೇಶಗಳಲ್ಲೂ ರವಿವಾರ ಬೆಳಗ್ಗೆ 5 ಗಂಟೆಯಿಂದ ಸಂಜೆ 6ರವರೆಗೆ ಸಾಮಾನ್ಯ ನಾಗರಿಕರು ತಮ್ಮ ನಿವಾಸಗಳಿಂದ ಹೊರಬರಲು ಹೇರಲಾಗಿದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ" ಎಂದು ಅದರಲ್ಲಿ ತಿಳಿಸಲಾಗಿದೆ.
ಈ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಗಮನಾರ್ಹ ಪ್ರಮಾಣದಲ್ಲಿ ಸುಧಾರಣೆಯಾಗಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿರುವ ಅಧಿಸೂಚನೆಯು, ಜನರು ಔಷಧಿಗಳು ಹಾಗೂ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ನಿರ್ಬಂಧವನ್ನು ಸಡಿಲಿಸಬೇಕಾದ ಅಗತ್ಯವಿದೆ ಎಂದೂ ಹೇಳಿದೆ.
ಈವರೆಗೆ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ನಡೆದಿರುವ ಮೈತಿ ಹಾಗೂ ಕುಕಿ ಸಮುದಾಯದ ನಡುವಿನ ಜನಾಂಗೀಯ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಮಣಿಪುರದ ಜನಸಂಖ್ಯೆಯಲ್ಲಿ ಶೇ. 53ರಷ್ಟಿರುವ ಮೈತಿ ಸಮುದಾಯವು ಬಹುತೇಕ ಇಂಫಾಲ ಕಣಿವೆ ಪ್ರದೇಶದಲ್ಲಿ ವಾಸಿಸುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟಾಗಿ ಶೇ. 40ರಷ್ಟು ಪ್ರಮಾಣದಲ್ಲಿರುವ ನಾಗಾ ಹಾಗೂ ಕುಕಿ ಸಮುದಾಯಗಳು ಗಿರಿ ಪ್ರದೇಶದ ಜಿಲ್ಲೆಗಳಲ್ಲಿ ನೆಲೆಸಿವೆ.