ಮಣಿಪುರ | ಭದ್ರತಾ ಪಡೆಯಿಂದ 4 ಬಂಕರ್ಗಳ ನಾಶ
ಸಾಂದರ್ಭಿಕ ಚಿತ್ರ | PC : PTI
ಇಂಫಾಲ : ಮಣಿಪುರದ ಇಂಫಾಲ ಪೂರ್ವ ಹಾಗೂ ಕಂಗ್ಪೊಕ್ಪಿ ಜಿಲ್ಲೆಗಳಲ್ಲಿ ಶಸಸ್ತ್ರ ದುಷ್ಕರ್ಮಿಗಳಿಗೆ ಸೇರಿದ ನಾಲ್ಕು ಬಂಕರ್ ಗಳನ್ನು ನೆಲಸಮಗೊಳಿಸುವಲ್ಲಿ ಭದ್ರತಾ ಪಡೆಗಳು ಸಫಲವಾಗಿವೆ. ಅಲ್ಲದೆ, ಅವರು ಮತ್ತೆ ಮೂರು ಬಂಕರ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ನಡೆದ ದೊಡ್ಡ ಮಟ್ಟದ ಕಾರ್ಯಾಚರಣೆ ಥಮ್ನಪೊಕ್ಪಿ ಹಾಗೂ ಸನಸಬಿ ಗ್ರಾಮಗಳ ಗಡಿಯ ವಿವಿಧ ಪ್ರದೇಶಗಳಲ್ಲಿರುವ ಬಂಕರ್ ಗಳನ್ನು ನಾಶಗೊಳಿಸಲು ಕಾರಣವಾಯಿತು.
‘‘ಥಮ್ನಪೊಕ್ಪಿ ಹಾಗೂ ಸನಸಬಿಯಲ್ಲಿ ಇತ್ತೀಚೆಗೆ ನಡೆದ ಗುಂಡಿನ ದಾಳಿಯ ಘಟನೆಗಳಲ್ಲಿ ಭಾಗಿಯಾದ ಎಲ್ಲಾ ಶಸಸ್ತ್ರ ದುಷ್ಕರ್ಮಿಗಳನ್ನು ಹೊರದಬ್ಬಲಾಗಿದೆ. ನಾಲ್ಕು ಅಕ್ರಮ ಬಂಕರ್ ಗಳನ್ನು ನಾಶಪಡಿಸಲಾಗಿದೆ. ಕಣಿವೆ ಹಾಗೂ ಗುಡ್ಡಗಾಡು ಪ್ರದೇಶದಲ್ಲಿರುವ ಮೂರು ಬಂಕರ್ ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ’’ ಎಂದು ಪೊಲೀಸರು ತಿಳಿಸಿದ್ದಾರೆ.
ಸೇನೆ, ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯನ್ನು ಒಳಗೊಂಡ ಜಂಟಿ ಪಡೆ ಕಂಗ್ಪೊಕ್ಪಿ ಜಿಲ್ಲೆಯಲ್ಲಿರುವ ಉಯೋಕ್ ಚಿಂಗ್ನ ಕಮಾಂಡಿಂಗ್ ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ತಮ್ನಪೊಕ್ಪಿ ಹಾಗೂ ಸನಸಬಿಯ ಗ್ರಾಮಗಳಲ್ಲಿ ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಪೊಲೀಸ್ ಅಧಿಕಾರಿ ಹಾಗೂ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಂಗ್ ಪೊಕ್ಪಿ ಜಿಲ್ಲೆಯಲ್ಲಿರುವ ಸಮೀಪದ ಗುಡ್ಡಗಾಡುಗಳಲ್ಲಿ ನಿಂತುಕೊಂಡು ಬಂದೂಕುದಾರಿಗಳು ತಮ್ನಪೊಕ್ಪಿ ಹಾಗೂ ಸನಸಬಿಯ ತಗ್ಗು ಪ್ರದೇಶದಲ್ಲಿರುವ ಗ್ರಾಮಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅವರು ಹಾಗೂ ಭದ್ರತಾ ಪಡೆಗಳು, ಸ್ವಯಂಸೇವಕರ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಮಣಿಪುರದಲ್ಲಿ ಕಳೆದ ವರ್ಷ ಮೇಯಿಂದ ಆರಂಭವಾದ ಮೈತೈ ಹಾಗೂ ಕುಕಿ ರೆ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.