ಪ್ರತ್ಯೇಕ ಬೆಟ್ಟ ರಾಜ್ಯಕ್ಕೆ ಕುಕಿ ಪಟ್ಟು: ಮಣಿಪುರ ಮಾತುಕತೆಗೆ ತಡೆ

PC : PTI
ಗುವಾಹತಿ: ಸಂಘರ್ಷ ಪೀಡಿತ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಉದ್ದೇಶದಿಂದ ಕುಕಿ ಝೋ ಸಮುದಾಯ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿ ಎ.ಕೆ.ಮಿಶ್ರಾ ನಡುವೆ ನಡೆಯುತ್ತಿರುವ ಮಾತುಕತೆಯಲ್ಲಿ ಯಾವುದೇ ಸಂಧಾನಕ್ಕೆ ಬರಲು ಸಾಧ್ಯವಾಗಿಲ್ಲ. ಮೈತೇ ಜನಾಂಗದ ಪ್ರಾಬಲ್ಯ ಇರುವ ಕಣಿವೆ ಪ್ರದೇಶಗಳನ್ನು ಕತ್ತರಿಸಿ ಉಳಿದ ಪ್ರದೇಶವನ್ನು ಪ್ರತ್ಯೇಕ ಬೆಟ್ಟ ರಾಜ್ಯವಾಗಿ ಘೋಷಿಸುವಂತೆ ಕುಕಿ ಸಮುದಾಯ ಪಟ್ಟು ಹಿಡಿದಿರುವುದು ಇದಕ್ಕೆ ಮುಖ್ಯ ಕಾರಣ.
ಆದರೆ ಸಂವಿಧಾನಾತ್ಮಕ ಚೌಕಟ್ಟಿಗೆ ವಿರುದ್ಧವಾಗಿ ಇರುವ ಈ ಬೇಡಿಕೆಯನ್ನು ಒಪ್ಪಿಕೊಳ್ಳಲಾಗದು ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.
ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬೆಟ್ಟ ಪ್ರದೇಶಕ್ಕೆ ಪ್ರತ್ಯೇಕ ಆಡಳಿತಾತ್ಮಕ ಚೌಕಟ್ಟು ಸ್ಥಾಪಿಸಬೇಕು ಎಂಬ ಕುಕಿ ಬೇಡಿಕೆಗೆ ಕೂಡಾ ಕೇಂದ್ರ ಮಣಿಯುವ ಸಾಧ್ಯತೆ ಇಲ್ಲ. ಈ ಬೇಡಿಕೆಯನ್ನು ಒಪ್ಪಿಕೊಂಡರೆ, ಪ್ರತ್ಯೇಕ ರಾಜ್ಯದ ಬೇಡಿಕೆಯ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ ಹಾಗೂ ಇತರ ಪ್ರಮುಖ ಗಡಿ ರಾಜ್ಯಗಳಲ್ಲಿ ಪ್ರತ್ಯೇಕತಾವಾದದ ಪ್ರವೃತ್ತಿ ಬೆಳೆಯಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಕುಕಿ ಪ್ರಾಬಲ್ಯದ ಕಂಗ್ ಪೋಕ್ಪಿಯಲ್ಲಿ ಮಾರ್ಚ್ 8ರಂದು ಹತ್ಯೆಯಾದ ಯುವಕನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರತಿಭಟನೆ ಮತ್ತು ರಸ್ತೆ ತಡೆ ಶೀಘ್ರ ಕೊನೆಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಚೌಕಟ್ಟಿನಲ್ಲೇ ಮೈತೇ ಮತ್ತು ಕುಕಿ ಝೋ ಸಮುದಾಯಗಳ ನಡುವೆ ಮಾತುಕತೆ ನಡೆಸಿ ಅವರಿಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಮತ್ತು ಅವರ ವಿಶಿಷ್ಟ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಸಂರಕ್ಷಿಸುವ ಪ್ರಯತ್ನ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.