ಗುಂಡಿನಿಂದ ಗಾಯಗೊಂಡ ಮ್ಯಾನ್ಮಾರ್ ಪ್ರಜೆ ಚಿಕಿತ್ಸೆ ವೇಳೆ ಸಾವು
ಆಸ್ಪತ್ರೆ ಎದುರು ಪ್ರತಿಭಟನೆ
Photo: scroll.in
ಇಂಫಾಲ: ಗುಂಡಿನ ದಾಳಿಯಿಂದ ಗಾಯಗೊಂಡ 23 ವರ್ಷದ ಮ್ಯಾನ್ಮಾರ್ ಪ್ರಜೆಗೆ ಚಿಕಿತ್ಸೆ ನೀಡುತ್ತಿದ್ದಾಗ ಮೃತಪಟ್ಟಿದ್ದಾನೆ ಎಂದು ಜಾವಹಾರ್ಲಾಲ್ ನೆಹರೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶುಕ್ರವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾದ ಮ್ಯಾನ್ಮಾರ್ ಪ್ರಜೆ ಚಿಕಿತ್ಸೆ ವೇಳೆ ಸಾವನ್ನಪ್ಪಿರುವುದನ್ನು ಖಂಡಿಸಿ ದೊಡ್ಡ ಸಂಖ್ಯೆಯ ಜನರು ಆಸ್ಪತ್ರೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಗುಡ್ಡಗಾಡಿನಲ್ಲಿ ಪ್ರಾಬಲ್ಯ ಇರುವ ಕುಕಿ ಬುಡಕಟ್ಟು ಹಾಗೂ ಕಣಿವೆಯಲ್ಲಿ ಪ್ರಾಬಲ್ಯ ಇರುವ ಮೈತೈ ಸಮುದಾಯದ ನಡುವೆ ಜನಾಂಗೀಯ ಉದ್ವಿಗ್ನತೆ ಹಾಗೂ ಮ್ಯಾನ್ಮಾರ್ನಿಂದ ಅಕ್ರಮವಾಗಿ ವಲಸಿಗರ ಒಳನುಸುಳುವಿಕೆ ತೀವ್ರ ಏರಿಕೆಯಾಗುತ್ತಿರುವ ನಡುವೆ ಈ ಘಟನೆ ನಡೆದಿದೆ. ಪ್ರತಿಭಟನೆಗೆ ಉದ್ವಿಗ್ನತೆಗೆ ತಿರುಗಿದಾಗ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಕೆಲವು ಅಶ್ರುವಾಯು ಸೆಲ್ಗಳನ್ನು ಸಿಡಿಸಿದರು.
ಭಾರತದ ಗಡಿಯ ಸಮೀಪದ ಮ್ಯಾನ್ಮಾರ್ನ ಥನ್ನಾನ್ ಗ್ರಾಮದ ನಿವಾಸಿಯಾಗಿರುವ ಖೊಹಾಂಟಂ ಅವರನ್ನು ಗುಂಡು ತಗುಲಿ ಗಾಯಗೊಂಡ 6 ಗಂಟೆ ಬಳಿಕ ಅಸ್ಸಾಂ ರೈಫಲ್ಸ್ ಹಾಗೂ ಉತ್ತರ ಮಣಿಪುರದ ಕಾಮ್ಜೋಂಗ್ ಜಿಲ್ಲೆ ಪೊಲೀಸರು ಇಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಮ್ಯಾನ್ಮಾರ್ ಪ್ರಜೆಯನ್ನು ಚಿಕಿತ್ಸೆಗೆ ರಾಜ್ಯದ ಹೊರಗೆ ಕೊಂಡೊಯ್ಯಬೇಕಿತ್ತು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದರು.
ಮೇ 3ರಿಂದ ಆರಂಭವಾದ ಬಹುಸಂಖ್ಯಾತ ಮೈತೈ ಹಾಗೂ ಬುಡಕಟ್ಟು ಜನಾಂಗೀಯ ಹಿಂಸಾಚಾರದಿಂದ ಮಣಿಪುರ ಜರ್ಝರಿತವಾಗಿದೆ. ಹಿಂಸಾಚಾರದಿಂದಾಗಿ 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸುಮಾರು 60,000 ಜನರು ತಮ್ಮ ಮನೆಗಳನ್ನು ತ್ಯಜಿಸಿ ಪರಾರಿಯಾದರು.