ಮಣಿಪುರದಲ್ಲಿ ಶಾಂತಿಪಾಲಕರ ಮೇಲೆಯೇ ದಾಳಿ: ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ಮೃತ್ಯು
ಗುವಾಹತಿ: ಶನಿವಾರ ಮಧ್ಯರಾತ್ರಿ ವೇಳೆ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಅಪರಿಚಿತ ಉಗ್ರರು ನಡೆಸಿದ ದಾಳಿಯಲ್ಲಿ ಸಿಆರ್ ಪಿಎಫ್ 128ನೇ ಬೆಟಾಲಿಯನ್ ಗೆ ಸೇರಿದ ಇಬ್ಬರು ಯೋಧರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಜನಾಂಗೀಯ ಸಂಘರ್ಷ ಆರಂಭವಾದ ಬಳಿಕ ಶಾಂತಿಪಾಲನೆಗಾಗಿ ನಿಯೋಜಿಸಿದ್ದ ಸಶಸ್ತ್ರ ಪೊಲೀಸರ ಮೇಲೆ ದಾಳಿ ನಡೆದಿರುವುದು ಇದೇ ಮೊದಲು.
ಮೃತ ಯೋಧರನ್ನು ಅಸ್ಸಾಂನ ಕೊಕ್ರಜಾರ್ ಜಿಲ್ಲೆ ಭೋಂಬ್ರಾಬಿಲ್ ಗ್ರಾಮದ ಸಬ್ ಇನ್ಸ್ಪೆಕ್ಟರ್ ಎನ್ ಸರ್ಕಾರ್ (55) ಮತ್ತು ಬಂಗಾಳದ ಬಂಕುರಾ ಜಿಲ್ಲೆಯ ಪಂಚಾಲ್ ಗ್ರಾಮದ ಅರೂಪ್ ಸೈನಿ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇನ್ಸ್ಪೆಕ್ಟರ್ ಜಾಧವ್ ದಾಸ್ ಮತ್ತು ಕಾನ್ಸ್ಟೇಬಲ್ ಅಫ್ತಾಬ್ ಅಲ್ ಹುಸೇನ್ ಅಸ್ಸಾಂನವರು. ಇವರನ್ನು ಇಂಫಾಲದ ಆರ್ ಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೇಹಸ್ಥಿತಿ ಸ್ಥಿರವಾಗಿದೆ.
ಬಂದೂಕು ಮತ್ತು ಬಾಂಬ್ ದಾಳಿ ನಡೆದಿದ್ದು, ಕಡುಗತ್ತಲಲ್ಲಿ ಬೆಟ್ಟ ಹಾಗೂ ಇಂಫಾಲ ಕಣಿವೆಯನ್ನು ಪ್ರತ್ಯೇಕಿಸುವ ಬಫರ್ ಝೋನ್ ನಲ್ಲಿ ಈ ದಾಳಿ ನಡೆದಿದೆ. ಶಿಬಿರದ ನಿವಾಸಿಗಳ ಮೇಲೆ ಉಗ್ರರು ಗುಂಡು ಹಾರಿಸಿದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರೂ, ನಾಲ್ವರಿಗೆ ಗುಂಡು ತಗುಲಿದೆ. ಆ ಪೈಕಿ ಇಬ್ಬರು ಮೃತಪಟ್ಟರು ಎಂದು ಮಣಿಪುರ ಭದ್ರತಾ ಸಲಹೆಗಾರ ಮತ್ತು ಮಾಜಿ ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ವಿವರಿಸಿದ್ದಾರೆ.