ಮಣಿಪುರ | ಇಂಫಾಲದಲ್ಲಿ 4 ಪೊಲೀಸ್ ಸಿಬ್ಬಂದಿಯನ್ನು ಅಪಹರಿಸಿ ಹಲ್ಲೆಗೈದ ಗುಂಪಿನ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ(PTI)
ಇಂಫಾಲ್ : ಮಣಿಪುರ ಪೊಲೀಸ್ ಪಡೆಯ ನಾಲ್ಕು ಸಿಬ್ಬಂದಿಯನ್ನು ಅಪಹರಿಸಿ ಅವರಿಗೆ ಹಲ್ಲೆಗೈದ ಆರೋಪದ ಮೇಲೆ ತೀವ್ರಗಾಮಿ ಮೀಟಿ ಸಂಘಟನೆ ಅರಂಬೈ ತೆಂಗ್ಗೊಲ್ ಇದರ ಇಬ್ಬರು ಸಸ್ಯರನ್ನು ಬಂಧಿಸಲಾಗಿದೆ. ಪೂರ್ವ ಇಂಫಾಲ್ನ ಕಂಗ್ಪೊಕ್ಪಿ ಎಂಬಲ್ಲಿ ಈ ಘಟನೆ ವರದಿಯಾಗಿದೆ.
ಈ ಸಂಘಟನೆಯ ಜನರು ಪೊಲೀಸ್ ಸಿಬ್ಬಂದಿಯನ್ನು ಅಪಹರಿಸಿ ಹಲ್ಲೆಗೈದ ಎರಡನೇ ಘಟನೆ ಇದಾಗಿದೆ.
ಬಂಧಿತರನ್ನು ತೈಬಂಗನ್ಬ ಸನೌಜಂ (25) ಮತ್ತು ಮೊಯಿರಂಗ್ತೆಮ್ ಬೊಬೊ (40) ಎಂದು ಗುರುತಿಸಲಾಗಿದೆ. ಇತರ ಆರೋಪಿಗಳಿಗೆ ಶೋಧ ಮುಂದುವರಿದಿದೆ.
ಶನಿವಾರ ಅಪರಾಹ್ನ ಕರ್ತವ್ಯದಲ್ಲಿದ್ದ ರಾಮ್ ಬಹದುರ್ ಕರ್ಕಿ, ರಮೇಶ್ ಬುದತೊಕಿ, ಮನೋಜ್ ಖಟಿವೊಡ ಮತ್ತು ಮುಹಮ್ಮದ್ ತೇಜ್ ಖಾನ್ ಎಂಬವರನ್ನು ಅಪಹರಿಸಿ ಹಲ್ಲೆಗೈಯ್ಯಲಾಗಿತ್ತು.
ಅದೇ ದಿನ ಅಪರಾಹ್ನ 3.30ಕ್ಕೆ ಅವರು ಕಂಗ್ಪೊಕ್ಪಿ ಠಾಣೆಗೆ ವಾಪಸಾಗಿದ್ದರು.
ಇಂಫಾಲದಲ್ಲಿರುವ ಪೊಲೀಸ್ ಮುಖ್ಯ ಕಾರ್ಯಾಲಯದಿಂದ ಕೆಲ ವಸ್ತುಗಳನ್ನು ಪಡೆಯಲು ಅವರನ್ನು ನಿಯೋಜಿಸಲಾಗಿತ್ತು, ಅವರಲ್ಲಿ ಮೂವರು ನೇಪಾಳಿ ಸಮುದಾಯದವರಾಗಿದ್ದರೆ ಒಬ್ಬರು ಮುಸ್ಲಿಮರಾಗಿದ್ದಾರೆ. ಅವರು ಮುಖ್ಯ ಕಾರ್ಯಾಲಯಕ್ಕೆ ಹೋದಾಗ ಯಾರೋ ಶಂಕಿತರು ಹೊರಗಿದ್ದಾರೆಂದು ತಿಳಿದು ಅವರು ಪಡೆಯಬೇಕಿದ್ದ ವಸ್ತುಗಳನ್ನು ಸಂಗ್ರಹಿಸದೆ ತೆರಳುವಂತೆ ಹೇಳಲಾಯಿತು.
ಅವರು ವಾಪಸಾಗುತ್ತಿದ್ದಾಗ 30 ಮಂದಿ ಶಸ್ತ್ರಸಜ್ಜಿತ ಜನರು ಅವರನ್ನು ತಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅವರನ್ನು ಥಳಿಸಿದ್ದರು. ಅವರ ನಗದು, ಮೊಬೈಲ್ ಫೋನ್ ಗಳನ್ನು ಕಸಿದುಕೊಂಡು ಅವರನ್ನು ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.