ಮಣಿಪುರ: ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ; ತಡವಾಗಿ ಬೆಳಕಿಗೆ ಬಂದ ಘಟನೆ
ಸಾಂದರ್ಭಿಕ ಚಿತ್ರ Photo: Twitter
ಗುವಾಹತಿ: ಮಣಿಪುರ ಜನಾಂಗೀಯ ಸಂಘರ್ಷದಲ್ಲಿ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ನಡೆಸಿ ಚಿತ್ರಹಿಂಸೆ ನೀಡಿದ ಘಟನೆಯ ಬೆನ್ನಲ್ಲೇ ಕಾರು ವಾಷಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಕೆಲಸದ ಸ್ಥಳದಿಂದ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ, 40 ಕಿಲೋಮೀಟರ್ ದೂರದಲ್ಲಿ ಹತ್ಯೆ ಮಾಡಿ ಎಸೆದಿರುವ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಮೇ 4ರ ಪ್ರತಿಭಟನೆ ವೇಳೆ ಈ ಕೃತ್ಯ ನಡೆದಿದ್ದು, ಜನಾಂಗೀಯ ಸಂಘರ್ಷದ ಸಂಬಂಧ ದಾಖಲಾಗಿರುವ 6000ಕ್ಕೂ ಅಧಿಕ ಎಫ್ಐಆರ್ಗಳ ಪಟ್ಟಿಯಲ್ಲಿ ಈ ಪ್ರಕರಣ ಹುದುಗಿ ಹೋಗಿತ್ತು. ಈ ಭೀಬತ್ಸ ಘಟನೆಯನ್ನು ದೂರದಿಂದ ನೋಡಿದ್ದ ಈ ಮಹಿಳೆಯರ ಸ್ನೇಹಿತೆಯೊಬ್ಬಳು ಪ್ರತಿಭಟನಾನಿರತ ಗುಂಪಿನ ಆಕ್ರೋಶದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚರ್ಚ್ ಒಂದರಲ್ಲಿ ಅಡಗಿದ್ದ ಸಂತ್ರಸ್ತೆಯ ಸಂಬಂಧಿಯೊಬ್ಬರಿಗೆ ಸ್ನೇಹಿತೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅಸ್ಸಾಂ ರೈಫಲ್ಸ್ ಈ ಸ್ನೇಹಿತೆಯನ್ನು ಕಂಗ್ ಪೊಕ್ಪಿಗೆ ಸ್ಥಳಾಂತರಿಸಿದ ಬಳಿಕವಷ್ಟೇ ಸಂತ್ರಸ್ತ ಕುಟುಂಬಗಳಿಗೆ ಈ ಮಾಹಿತಿ ಲಭ್ಯವಾಗಿದೆ.
ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರನ್ನು ಪೊಲೀಸ್ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮರುದಿನ ತೀವ್ರ ಗಾಯಗಳಿಂದ ಇಬ್ಬರೂ ಮೃತಪಟ್ಟಿದ್ದಾಗಿ ಪ್ರಕಟಿಸಲಾಗಿತ್ತು.
"ಮೇ 4ರಂದು ಸಂಜೆ 5.30ರ ವೇಳೆಗೆ ಕಾರ್ ವಾಷ್ ಮಳಿಗೆಗೆ ಮಹಿಳೆಯರ ದೊಡ್ಡ ಗುಂಪು ನುಗ್ಗಿತು. ಈ ಬುಡಕಟ್ಟು ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಿದ್ದುದು ಎಲ್ಲರಿಗೂ ತಿಳಿದಿತ್ತು. ಈ ಇಬ್ಬರನ್ನು ಕೊಠಡಿಯಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗುವಂತೆ ಮಹಿಳೆಯರೇ ಪುರುಷರಿಗೆ ಕುಮ್ಮಕ್ಕು ನೀಡಿದರು. ಅವರನ್ನು ಕೊಠಡಿಗೆ ಎಳೆದುಕೊಂಡು ಹೋಗಿ ದೀಪಗಳನ್ನು ಆರಿಸಿ ಒಬ್ಬರ ಬಳಿಕ ಒಬ್ಬರಂತೆ ಅತ್ಯಾಚಾರ ಎಸಗಿದರು. ಅವರು ಚೀರಿಕೊಳ್ಳದಂತೆ ಬಾಯಿಗೆ ಬಟ್ಟೆ ತುರುಕಿದ್ದರು" ಎಂದು ಸಹೋದ್ಯೋಗಿಯೊಬ್ಬರು ಘಟನೆಯನ್ನು ವಿವರಿಸಿದ್ದಾರೆ.
ಸುಮಾರು ಒಂದೂವರೆ ಗಂಟೆ ಕಾಲ ಈ ಕೃತ್ಯ ಮುಂದುವರಿದಿದ್ದು, ಬಳಿಕ ಇಬ್ಬರು ಮಹಿಳೆಯರನ್ನು ಹೊರಕ್ಕೆ ಎಳೆದು ಪಕ್ಕದ ಮರದ ಮಿಲ್ ಬಳಿ ಎಸೆದು ಹೋದರು. ಅವರ ಬಟ್ಟೆಗಳು ಹರಿದಿದ್ದವು. ಕೂದಲು ಕತ್ತರಿಸಲಾಗಿತ್ತು ಹಾಗೂ ದೇಹಗಳು ರಕ್ತಸಿಕ್ತವಾಗಿದ್ದವು ಎಂದು ತಿಳಿಸಿದ್ದಾರೆ.