ಮಣಿಪುರ ಸಿಎಂ ರಾಜೀನಾಮೆ ಪತ್ರ ಹರಿದು ಹಾಕಿದ ಬೆಂಬಲಿಗರು: ನಿರ್ಧಾರದಿಂದ ಹಿಂದೆ ಸರಿದ ಬಿರೇನ್ ಸಿಂಗ್
ಇಂಫಾಲ: ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಧ್ಯಾಹ್ನದ ಹೊತ್ತಿಗೆ ಸುಮಾರು 20 ಶಾಸಕರ ನಿಯೋಗದೊಂದಿಗೆ ತಮ್ಮ ನಿವಾಸದಿಂದ ರಾಜ್ಯಪಾಲರ ನಿವಾಸದ ಕಡೆಗೆ ತೆರಳಿದ ಬಿರೇನ್ ಸಿಂಗ್ ಅವರನ್ನು ಬೆಂಬಲಿಗರ ಗುಂಪು ತಡೆದಿದ್ದು, ರಾಜಿನಾಮೆ ನೀಡದಂತೆ ಆಗ್ರಹಿಸಿದ್ದಾರೆ. ಅಲ್ಲದೆ, ರಾಜ್ಯಪಾಲರಿಗೆ ಸಲ್ಲಿಸಬೇಕಿದ್ದ ರಾಜೀನಾಮೆ ಪತ್ರವನ್ನು ಬೆಂಬಲಿಗರು ಹರಿದು ಹಾಕಿದ್ದಾರೆ ಎಂದು theNewindianexpress.com ವರದಿ ಮಾಡಿದೆ.
ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸಲು ವಿಫಲರಾದ ಸಿಎಂ ಬಿರೇನ್ ಸಿಂಗ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜಿನಾಮೆ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಬೆಂಬಲಿಗರ ಒತ್ತಡಕ್ಕೆ ಮಣಿದು ತಮ್ಮ ನಿರ್ಧಾರದಿಂದ ಸಿಎಂ ಹಿಂದೆ ಸರಿದಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
“ಈ ನಿರ್ಣಾಯಕ ಘಟ್ಟದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
“ನಾವು ಸಿಎಂ ನಿವಾಸಕ್ಕೆ ತೆರಳಿ, ಜನರ ಇಚ್ಛೆಯಂತೆ ರಾಜೀನಾಮೆಯನ್ನು ಮರುಪರಿಶೀಲಿಸುವಂತೆ ನಾವು ಅವರಿಗೆ ಮನವಿ ಮಾಡಿದ್ದೇವೆ. ಸಿಎಂಗೆ ಮನವರಿಕೆ ಮಾಡಿದ ನಂತರ ಕೆಲವು ಸಚಿವರು ರಾಜೀನಾಮೆ ನೀಡದಿರಲು ಒಪ್ಪಿಕೊಂಡಿದ್ದಾರೆ” ಎಂದು ಸರ್ಕಾರದ ವಕ್ತಾರ ಮತ್ತು ಸಚಿವ ಸಪಂ ರಂಜನ್ ಸಿಂಗ್ ಹೇಳಿದ್ದಾರೆ.